ಕಾಂಗ್ರೆಸ್ ಸದೃಢತೆಗೆ ಶ್ರಮಿಸಲು ಕಾರ್ಯಕರ್ತರಿಗೆ ಕರೆ

ಮಧುಗಿರಿ, ಜು. ೧೨- ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢ ಮಾಡುವ ಅವಶ್ಯಕತೆ ಇದ್ದು, ಇದಕ್ಕೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಇದು ನನಗೆ ತೃಪ್ತಿ ತಂದಿದ್ದು, ಕಾರ್ಯಕರ್ತರು ಹಾಗೂ ಹೆಚ್ಚಿನದಾಗಿ ಯುವಕರು ಮನೆ ಮನೆಗೂ ತೆರಳಿ ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಈಗಿನ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸಿ ಮನವೊಲಿಸಬೇಕು ಎಂದರು.
ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿ ಮಾಡುವುದು, ಮಧುಗಿರಿಯನ್ನು ಜಿಲ್ಲೆ ಮಾಡುವುದು, ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದರ ಜತೆಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದ ಅವರು, ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿಗೆ ಮಣೆ ಹಾಕಿ ನನಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಕೊಡಿಗೇನಹಳ್ಳಿ ಹೋಬಳಿ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದ್ದರೂ ಸಹ ನಿಜಾಯಿತಿ ಇರುವ ಜನ ಇದ್ದಾರೆ. ಈ ಭಾಗದಿಂದ ಮುಂದಿನ ಚುನಾವಣೆಯಲ್ಲಿ ಹೆಚ್ಚು ಬಹುಮತ ಬರುವ ನಿರೀಕ್ಷೆ ಇದ್ದು, ಕಾಂಗ್ರೆಸ್ ಪಕ್ಷದಲ್ಲಿನ ಒಡಕುಗಳಿಂದ ಕಳೆದ ಬಾರಿ ನಮಗೆ ಸೋಲಾಗಿದ್ದು, ಇದನ್ನು ಸರಿಪಡಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು. ಕ್ಷೇತ್ರದಲ್ಲಿ ಕಳೆದ ೪ ವ?ಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಒಂದೇ ಒಂದು ಮನೆಯನ್ನೂ ಸಹ ತರಲಾಗಿಲ್ಲ. ಇದನೆಲ್ಲ ಅರಿತು ಮತದಾರರು ನಿರ್ಣಯ ತೆಗೆದುಕೊಳ್ಳಬೇಕು ಎಂದ ಅವರು, ನಾನು ಸೇವೆ ಮಾಡಿ ಮತ ಕೇಳುತ್ತೇನೆ ಹೊರತು ಹಣ ಹಂಚಿ ಅಧಿಕಾರ ಪಡೆಯುವವನಲ್ಲ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಅನೇಕ ಸವಲತ್ತುಗಳನ್ನು ಪಡೆದ ಜನರೇ ನಮಗೆ ಏನು ಮಾಡಿಲ್ಲ ಎಂದು ಹೇಳಿಕೊಂಡು ಓಡಾಡುತ್ತಾರೆ. ಉಪಕಾರ ಸ್ಮರಣೆ ಇಲ್ಲದ ಮನುಷ್ಯ ಎಂದಿಗೂ ಉದ್ದಾರ ಆಗುವುದಿಲ್ಲ. ನಮ್ಮದು ಸರ್ವ ಧರ್ಮ ಹೊಂದಿರುವ ದೇಶವಾಗಿದ್ದು, ಬಿಜೆಪಿ ಸರ್ಕಾರ ಕೋಮು ಗಲಭೆ ಎಬ್ಬಿಸಿ ಜಾತಿ ಜಾತಿಗಳ ಮಧ್ಯೆ ದ್ವೇಷ ಹೊತ್ತಿಸಿ ಅಶಾಂತಿ ಉಂಟು ಮಾಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನನಗೆ ವಹಿಸಿರುವುದು ಸಂತಸ ತಂದಿದೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಪ್ರೇಮಲತಾ ರಾಮಾಂಜಿನಪ್ಪ, ಅಶ್ವತಪ್ಪ, ಉಪಾಧ್ಯಕ್ಷ ಮಂಜುನಾಥ ರೆಡ್ಡಿ, ಮುಖಂಡರುಗಳಾದ ಟಿ.ಪಿ.ಮಂಜುನಾಥ್, ವಿ.ಆರ್. ಭಾಸ್ಕರ್, ಸಂಜೀವ್ ಗೌಡ, ಆದಿನಾರಾಯಣ ರೆಡ್ಡಿ, ಪಿ.ಟಿ.ಗೋವಿಂದಪ್ಪ, ಕಾಂತರಾಜು, ಜಗದೀಶ್, ರಾಮಣ್ಣ, ನರಸೇಗೌಡ, ಬಸವರಾಜು, ಜೆ.ಡಿ.ವೆಂಕಟೇಶ್, ಸುರೇಶ್, ನರಸೀಯಪ್ಪ, ಪಂಚಾಕ್ಷರಯ್ಯ, ಸುಬ್ಬರಾಯಣ್ಣ, ಚಿಕ್ಕರಂಗಪ್ಪ, ರಂಗಶಾಮಪ್ಪ, ಲಕ್ಷ್ಮೀನರಾಸೆಗೌಡ, ನರಸಿಂಹ ಮೂರ್ತಿ, ಚೆನ್ನಾಸ್ವಾಮಿ ಗೌಡ, ಗೋವಿಂದಪ್ಪ, ರಾಜಣ್ಣ, ಮಂಜುಳಾ ನಾಗರಾಜು, ಪ್ರಸಾದ್ ರೆಡ್ಡಿ, ಶಶಿಕುಮಾರ್, ಲಿಂಗರಾಜು, ಅನಿಲ್ ಕುಮಾರ್, ಮುತ್ತೇಶ್, ಅನಿಲ್ ಕುಮಾರ್, ರಾಘವೇಂದ್ರ ಚಲಪತಿ, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.