ಕಾಂಗ್ರೆಸ್ ಸದಸ್ಯರಾಗಿ ಈ.ವಿನಯ್ ಜಾದಳ ಸೇರ್ಪಡೆ – ಸಾರ್ವಜನಿಕರ ಮಧ್ಯೆ ಪಕ್ಷಕ್ಕೆ ಮುಜುಗರ

ಈ.ವಿನಯ್, ಶಹನಾಜ ಬೇಗಂ ಪಕ್ಷ ವಿರೋಧಿ ಚಟುವಟಿಕೆ – ಕ್ರಮಕ್ಕೆ ಮನವಿ

  • ರಾಯಚೂರು.ನ.೦೧- ನಗರಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಮತ ಚಲಾಯಿಸಿ, ೬ ತಿಂಗಳು ಕಳೆದು, ಪ್ರಸ್ತುತ ಜಾದಳ ಪಕ್ಷವನ್ನು ಅಧಿಕೃತ ಸೇರ್ಪಡೆಗೊಂಡಿರುವ ವಾರ್ಡ್ ೧೨ ರ ನಗರಸಭೆ ಸದಸ್ಯರಾದ ಈ.ವಿನಯಕುಮಾರ ಅವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ನಾಯಕ ಅವರು ಕ್ರಮ ಕೈಗೊಳ್ಳಬೇಕೆಂದು ವಾರ್ಡ್ ೧೫ ರ ನಗರಸಭೆ ಸದಸ್ಯರು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಸಾಜೀದ್ ಸಮೀರ್ ಅವರು ಮನವಿ ಮಾಡಿದ್ದಾರೆ.
    ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿ ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ೬ ತಿಂಗಳು ಕಳೆದರೂ, ಇಲ್ಲಿವರೆಗೂ ಸದಸ್ಯತ್ವ ರದ್ದುಗೊಳಿಸುವ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೆ ಜಾದಳ ಪಕ್ಷಕ್ಕೆ ಅವರು ಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವ್ಯಾಪಾಕವಾಗಿ ಹರಿದಾಡುತ್ತಿವೆ. ಇಷ್ಟೆಲ್ಲ ಘಟನೆಗಳು ನಡೆದಿದ್ದರೂ, ಇಲ್ಲಿವರೆಗೂ ವಿನಯಕುಮಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಪಕ್ಷ ತೀವ್ರ ಮುಜುಗರಕ್ಕೆ ಗುರಿಯಾಗುವಂತೆ ಮಾಡಿದೆ.
    ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ವಿನಯಕುಮಾರ ಅವರು ಜಾದಳ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪೂರ್ವ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದು ನೈತಿಕತೆ. ಆದರೆ, ಕಾಂಗ್ರೆಸ್ ಸದಸ್ಯರಾಗಿ ಇದ್ದುಕೊಂಡೇ ಜಾದಳ ಸೇರ್ಪಡೆಗೊಂಡಿದ್ದಾರೆ. ಆದರೂ, ಕಾಂಗ್ರೆಸ್ ಪಕ್ಷ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಪಕ್ಷ ಸಾರ್ವಜನಿಕರ ಮಧ್ಯೆ ತೀವ್ರ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಾರ್ಡ್ ೨೬ ಶಹನಾಜ್ ಬೇಗಂ ಮತ್ತು ವಾರ್ಡ್ ೧೨ ರ ಸದಸ್ಯರಾದ ವಿನಯಕುಮಾರ ಅವರು ಪಕ್ಷ ವಿರೋಧಿ ಚಟುವಟಿಕೆ ಮತ್ತು ಮತ ಚಲಾವಣೆ ಹಿನ್ನೆಲೆಯಲ್ಲಿ ಉಭಯರ ಸದಸ್ಯತ್ವ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ೬ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಜಿಲ್ಲಾಧ್ಯಕ್ಷರಾದ ಬಿ.ವಿ.ನಾಯಕ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸದಸ್ಯತ್ವ ರದ್ದಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿದ್ದಾರೆ.