ಕಾಂಗ್ರೆಸ್ ಶಾಸಕರಿಂದ ದಬ್ಬಾಳಿಕೆಯ ಆಡಳಿತ-ಮಹೇಶ್

ಕೋಲಾರ,ಜು.೧೪: ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗ್ರಾಪಂ ಸದಸ್ಯರನ್ನು ಹೆದರಿಸಿ ಹಾಗೂ ಅಧಿಕಾರ ಹಣ ಆಮಿಷಗಳನ್ನು ಒಡ್ಡಿ ಅಧಿಕಾರವನ್ನು ಹಿಡಿಯಲು ದಬ್ಬಾಳಿಕೆ ನಡೆಸುತ್ತಿರುವುದಕ್ಕೆ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲು ಬಿಜೆಪಿ ಸಿದ್ದವಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ಎಚ್ಚರಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಲಿಬೆಲೆ ಗ್ರಾಪಂನಲ್ಲಿ ಒಂದೂವರೆ ವರ್ಷದ ಹಿಂದೆ ಕಾಂಗ್ರೆಸ್ ೧೬ ಸದಸ್ಯರಿದ್ದರು, ಬಿಜೆಪಿ ಕೇವಲ ೫ ಸದಸ್ಯರನ್ನು ಹೊಂದಿದ್ದರು. ಹಾಲಿ ಗ್ರಾಪಂ ಅಧ್ಯಕ್ಷರಾಗಿದ್ದ ಆರ್.ವಿ.ಸುರೇಶ್ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ೧೦ ಸದಸ್ಯರ ಬಲಕ್ಕೆ ಕುಸಿದಿದೆ. ೫ ಸದಸ್ಯ ಬಲವಿದ್ದ ಬಿಜೆಪಿ ೧೦ ಸದಸ್ಯ ಬಲಕ್ಕೆ ಏರಿಕೆ ಆಗಿರುವುದನ್ನು ಸಹಿಸದೇ ಬಿಜೆಪಿ ವಿರುದ್ದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ದೂರಿದರು.
ಹುಲಿಬೆಲೆ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಮಬಲ ಬಂದಿದೆ. ಇಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದುಕೊಂಡು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಅವರ ಬೆಂಬಲಿಗ ಮುಖಂಡರು ಎಸ್.ಎನ್ ಸಿಟಿಯಲ್ಲಿದ್ದರು. ಸಮಬಲ ಬಂದಿರುವುದರಿಂದ ಲಾಟರಿಯಲ್ಲಿ ಅಧ್ಯಕ್ಷ ಸ್ಥಾನವು ಕಾಂಗ್ರೆಸ್‌ಗೆ ಸಿಕ್ಕಿರುವುದರಿಂದ ಇದೇ ದೊಡ್ಡ ಸಾಹಸ ಎಂದುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಲಾಟರಿಯಲ್ಲಿ ಗೆದ್ದ ಬಳಿಕ ಬಂದು ದೊಡ್ಡ ಸಾಹಸ ಮಾಡಿರುವ ಹಾಗೆ ಬಿಜೆಪಿ ವಿರುದ್ದ ಹೇಳಿಕೆ ನೀಡಿದ್ದಾರೆ. ಬಲಿಷ್ಠವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲು ಏಕೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಬಿಜೆಪಿ ಪಕ್ಷವು ಪ್ರತಿ ಚುನಾವಣೆಯಲ್ಲಿಯೂ ಸಹ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುತ್ತದೆ. ಕಳೆದ ೯ ವರ್ಷಗಳಿಂದಲೂ ಶಾಸಕರಾಗಿರುವ ಎಸ್.ಎನ್.ನಾರಾಯಣಸ್ವಾಮಿರಿಂದ ತಾಲೂಕು ಪಂಚಾಯ್ತಿಯನ್ನು ಹಿಡಿಯುವುದಕ್ಕೆ ಆಗಲಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸುತ್ತಲೇ ಇದೆ. ಕ್ಷೇತ್ರದಲ್ಲಿ ಶಾಸಕರ ವಿರುದ್ದ ವಿರೋಧಿ ಅಲೆ ಹೆಚ್ಚಾಗುತ್ತಿದೆ. ಇದನ್ನು ಮರೆಮಾಚಲು ಸಾಕಷ್ಠು ಪ್ರಯತ್ನ ಮಾಡುತ್ತಿದ್ದು, ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ಬಂದರೂ ಬಿಜೆಪಿ ಪಕ್ಷವು ತನ್ನ ತಾಕತ್ತುನ್ನು ತೋರಿಸಲಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿಯವರು ಕೌರವವರಂತೆ, ಕಾಂಗ್ರೆಸ್‌ನವರು ಪಾಂಡವರೆಂದು ಹಾಗೂ ಪ್ರತಿ ಚುನಾವಣೆಯು ಧರ್ಮ-ಅಧರ್ಮಗಳ ನಡುವೆ ಯುದ್ದ ಎಂದು ಹೇಳಿಕೆ ನೀಡಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಯಾರು ಪಾಂಡವರು, ಯಾರು ಕೌರವವರು ಎಂಬುದನ್ನು ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿರಿಗೆ ಈ ಕ್ಷೇತ್ರದ ಮತದಾರರು ತೋರಿಸಲಿದ್ದಾರೆಂದು ಎಚ್ಚರಿಸಿದರು.