ಕಾಂಗ್ರೆಸ್ ವಿರುದ್ಧ ಸೋಮಣ್ಣ ವಾಗ್ದಾಳಿ

ಆಯೋಗಕ್ಕೆ ಪತ್ರ
ಮೈಸೂರು,ಏ.೨೮-ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಪ್ರಕರಣ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕಿಡಿಕಾರಿದ್ದಾರೆ. ವರುಣಾ ವಿಧಾನ ಸಭಾ ಕ್ಷೇತ್ರದ ಸ್ಥಿತಿಗತಿ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ನಿನ್ನೆ ನಡೆದ ಘಟನೆ ವಿಚಾರದಲ್ಲಿ ಪೊಲೀಸರು ಕುತಂತ್ರ ಮಾಡಿದ್ದಾರೆ ಎಂದು ದೂರಿದ್ದಾರೆ.
ನಿನ್ನೆ ಸಿದ್ದರಾಮನಹುಂಡಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಅಣ್ಣನ ನಿವಾಸದ ಬಳಿಯೇ ಈ ಗಲಾಟೆ ನಡೆದಿದೆ. ಸೋಲು ಹಾಗೂ ಹತಾಶೆಯಿಂದ ಈ ಕೆಲಸ ಮಾಡಿದ್ದಾರೆ. ತಾವು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಅಲ್ಲಿಗೆ ಕೆಲವರು ಬರುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ತಮ್ಮ ಪಕ್ಷದ ಕಾರ್ಯಕರ್ತರಿಗೆ ಆಗಿರುವ ನೋವು ಸಿದ್ದರಾಮಯ್ಯರವರ ಅಣ್ಣನ ಮಗನಿಗೆ ಆಗಿದ್ದರೆ ಯಾವ ದೃಷ್ಠಿಯಲ್ಲಿ ನೋಡುತ್ತಿದ್ದರು ಎಂದು ಪ್ರಶ್ನಿಸಿದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಘನತೆಗೆ ಒಳ್ಳೆಯದಲ್ಲ ತಮ್ಮನ್ನು ಹೆದರಿಸಲು ಸಾಧ್ಯವಿಲ್ಲ ತಾವು ವಿಚಲಿತರಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್‌ಗೆ ಸೋಲಿನ ಭಯ ಶುರುವಾಗಿದೆ ಬಿಜೆಪಿ ಪ್ರಚಾರ ಮಾಡಿದ ಕಡೆಗಳಲ್ಲಿ ಕೆಲವರು ಅಸಭ್ಯ ಪದ ಬಳಸಿ ಟೀಕೆ ಮಾಡಿ ಸಿದ್ದರಾಮಯ್ಯನವರು ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಚಾರದ ಮೆರವಣಿಗೆ ವೇಳೆ ಗಲಾಟೆ ಮಾಡಿ ಬಕೆಟ್‌ಗಳಲ್ಲಿ ಕಲ್ಲು ಇಟ್ಟುಕೊಂಡಿದ್ದರು. ಇದನ್ನೆಲ್ಲಾ ಗಮನಿಸಿದರೆ ಗಲಾಟೆ ಮಾಡಲು ತಯಾರಿ ಮಾಡಿಕೊಂಡು ಬಂದಿದ್ದರು. ಸೋಲುವ ಹತಾಶೆಯಿಂದ ಸಿದ್ದರಾಮಯ್ಯ ಬೆಂಬಲಿಗರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವರ್ತನೆ ಮುಂದುವರೆಸಿದರೆ ನಮಗೂ ಶಕ್ತಿ ಇರುವುದನ್ನು ಸಾಬೀತು ಮಾಡಬೇಕಾಗುತ್ತದೆ. ಇದರಿಂದಾಗಿ ವರುಣಾದಲ್ಲಿ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಪ್ರತಾಪ ಸಿಂಹ ಹೇಳಿದರು.