ನವದೆಹಲಿ,ಮೇ.೨೯- ದೇಶದಲ್ಲಿ ಅಳ್ವಿಕೆ ನಡೆಸಿದ ಹಿಂದಿನ ಸರ್ಕಾರಗಳು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡಿದ್ದವು. ಇದರಿಂದ ಅಭಿವೃದ್ಧಿಯಿಂದ ಈ ಭಾಗದ ರಾಜ್ಯಗಳು ವಂಚಿತವಾಗಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದು ನಮ್ಮ ಬದ್ದತೆ ಎಂದಿದ್ದಾರೆ.
ಅಸ್ಸಾಂನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, “ಹಿಂದಿನ ಸರ್ಕಾರದಿಂದ ಈಶಾನ್ಯ ರಾಜ್ಯಗಳ ಜನರು ದೀರ್ಘಕಾಲ ಅಭಿವೃದ್ಧಿಯಿಂದ ದೂರವಿದ್ದರು” ಈಗ ಕಾಲ ಬದಲಾಗಿದೆ ಎಂದು ಹೇಳಿದ್ದಾರೆ.
೨೦೧೪ ರ ಮೊದಲು, ಈಶಾನ್ಯಕ್ಕೆ ರೈಲ್ವೆಯ ಬಜೆಟ್ ೨,೫೦೦ ಕೋಟಿ ಆಗಿತ್ತು. ಈಗ ಅದು ೧೦.೦೦೦ ಕೋಟಿಗೂ ಹೆಚ್ಚು ಅಂದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ಈಶಾನ್ಯದ ಎಲ್ಲಾ ಭಾಗಗಳನ್ನು ಶೀಘ್ರದಲ್ಲೇ ಬ್ರಾಡ್-ಗೇಜ್ ನೆಟ್ವರ್ಕ್ ಮೂಲಕ ಸಂಪರ್ಕಿಸಲಾಗುವುದು. ಇದಕ್ಕಾಗಿ ೧ ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಮುಖ ಸ್ಥಳಗಳಾದ ಕಾಮಾಖ್ಯ ದೇವಾಲಯ, ಕಾಜಿರಂಗ ಅಭಯಾರಣ್ಯ, ಅಸ್ಸಾಂನ ಮಾನಸ್ ಟೈಗರ್ ರಿಸರ್ವ್, ಮೇಘಾಲಯದ ಶಿಲ್ಲಾಂಗ್ ಮತ್ತು ಚಿರಾಪುಂಜಿ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ಗಳನ್ನು ಸಂಪರ್ಕಿಸುವ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಕ್ಕೆ ಹೋಗುವ ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣ ಮತ್ತು ಅಸ್ಸಾಂನ ಗುವಾಹಟಿ ನಡುವೆ ಚಲಿಸುತ್ತದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.