ಕಾಂಗ್ರೆಸ್ ವಿರುದ್ಧ ಬಿವೈವಿ ವಾಗ್ದಾಳಿ

ಬೆಂಗಳೂರು:ನ.೨೬ ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಎಸ್‌ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ “ಸಂವಿಧಾನ ಸಮರ್ಪಣಾ ದಿನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವಸಂಸ್ಕಾರವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ನೆಹರೂ ಸ್ಮಾರಕಕ್ಕೆ ೩೦ ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ ೨೦ ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಮೋದಿಜೀ ಅವರು ಅಂಬೇಡ್ಕರ್ ಅವರ ಸ್ಮಾರಕ ಘೋಷಿಸಿ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ ಎಂದ ಅವರು, ಬಿಜೆಪಿ ಸರಕಾರವು ಪಂಚತೀರ್ಥಗಳನ್ನು ಅಭಿವೃದ್ಧಿ ಮಾಡಿದ್ದನ್ನು ನೆನಪಿಸಿದರು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್ ಎಂದು ವಿವರಿಸಿದರು.
೨೬ ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ಪ್ರಧಾನಿ ನರೇಂದ್ರಮೋದಿಯವರು. ಬಿಜೆಪಿ ಉದ್ದೇಶವೇ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು ಎಂದರು.

ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ೨೦೧೫ರವರೆಗೂ ನವೆಂಬರ್ ೨೬ರ ಈ ದಿನವನ್ನು ಲಾಡೆ ಎಂದು ಕರೆಯುತ್ತಿದ್ದರು. ಸಂವಿಧಾನ ಗೌರವ ದಿನ ಎಂದು ಅದನ್ನು ಆಚರಿಸಲು ನರೇಂದ್ರ ಮೋದಿಜೀ ಅವರು ತಿಳಿಸಿದರು ಎಂದು ವಿವರಿಸಿದರು. ಭಾರತರತ್ನವನ್ನು ಅವರಿಗೆ ಅವರೇ ಕೊಟ್ಟುಕೊಂಡರು. ನೈಜ ಭಾರತರತ್ನ ಡಾ. ಅಂಬೇಡ್ಕರ್ ಅವರಿಗೆ ಭಾರತರತ್ನವನ್ನು ಹಲವು ದಶಕಗಳ ಬಳಿಕ ಅಟಲ್‌ಜೀ ಅವರ ಪ್ರಸ್ತಾವನೆಯ ನಂತರ ಪ್ರಧಾನಿ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲದ ಸರಕಾರ ಇದ್ದಾಗ ನೀಡಿದ್ದರು ಎಂದು ನೆನಪಿಸಿದರು.
ಅವರಿಗೆ ಬದುಕಿದ್ದಾಗಲೇ ಭಾರತರತ್ನ ಕೊಡಬೇಕಿತ್ತು. ೩೩ ವರ್ಷಗಳ ವರೆಗೆ ಯಾಕೆ ಕೊಟ್ಟಿಲ್ಲ? ಅಂಬೇಡ್ಕರರಿಗೆ ಅವರ ವ್ಯಕ್ತಿತ್ವಕ್ಕೆ ತಡವಾಗಿ ನ್ಯಾಯ ಸಿಗುತ್ತಿದೆ ಎಂದು ವಿಶ್ಲೇಷಿಸಿದರು. ಅಂಬೇಡ್ಕರರ ಪಂಚತೀರ್ಥಗಳನ್ನು ಮೋದಿಜೀ ಅವರ ಸರಕಾರ ನಿರ್ಮಿಸಿದೆ. ಎಂದರು ಮಾಜಿ ಸಚಿವ ಗೋವಿಂದ ಕಾರಜೋಳ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಪಕ್ಷದ ಪದಾಧಿಕಾರಿಗಳು, ಎಸ್‌ಸಿ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.