ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಶಾಸಕರು, ಕಾರ್ಯಕರ್ತರು ಭಾಗವಹಿಸಿದ್ದರು.

ಮಾದರಿ ಎಟಿಎಂ ಪ್ರದರ್ಶನ
ಬೆಂಗಳೂರು, ಅ. ೧೭- ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಮೂರು ಎಟಿಎಂ ಮಾದರಿ ಯಂತ್ರಗಳನ್ನು ಪ್ರದರ್ಶಿಸುವ ಮೂಲಕ ಈ ಸರ್ಕಾರ ಎಐಸಿಸಿಗೆ ಎಟಎಂ ಆಗಿದೆ ಎಂದು ಬಿಜೆಪಿ ಬಿಂಬಿಸಿದೆ.ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಟಿಎಂ ಸರ್ಕಾರ ಬರೆಯಲ್ಪಟ್ಟ ಮೂರು ಮಾದರಿ ಎಟಿಎಂಗಳನ್ನು ಬಿಜೆಪಿ ನಾಯಕರು ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ರವಿ ಸುಬ್ರಹ್ಮಣ್ಯ ಸೇರಿದಂತೆ ಬಿಜೆಪಿಯ ಹಲವು ನಾಯಕರುಗಳು ಪಾಲ್ಗೊಂಡಿದ್ದರು.
ಅಶೋಕ್ ಟೀಕೆ
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಪಂಚರಾಜ್ಯ ಚುನಾವಣೆಗಳಿಗೆ ರಾಜ್ಯದಿಂದ ಹಣ ಹೋಗುತ್ತಿದೆ. ಗುತ್ತಿಗೆದಾರರಿಗೆ ಸರ್ಕಾರ ಬಂದು ೪ ತಿಂಗಳಾದರೂ ಹಣ ಬಿಡುಗಡೆ ಮಾಡಿರಲಿಲ್ಲ. ಈಗ ಪಂಚರಾಜ್ಯ ಚುನಾವಣೆ ಬಂದಿದ್ದರಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿ ಹಣ ಸಂಗ್ರಹಿಸಿದ್ದಾರೆ ಎಂದು ಮಾಜಿ ಸಚಿವ ಅಶೋಕ್ ದೂರಿದರು.ಈ ಭ್ರಷ್ಟ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಆಧಾರ ಇಲ್ಲದೆ ನಮ್ಮ ಮೇಲೆ ಶೇ. ೪೦ ರಷ್ಟು ಕಮೀಷನ್ ಆರೋಪ ಮಾಡಿದರು. ಈಗ ಐಟಿ ದಾಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಸಾಕ್ಷಿ ಸಿಕ್ಕಿದೆ. ಐಟಿ ದಾಳಿಯಾದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಡುಗಿದೆ. ಹುಷಾರಾಗಿ ವಸೂಲಿ ಮಾಡಿ ಎಂದು ಕೈ ಹೈಕಮಾಂಡ್ ಹೇಳಿದೆ ಎಂದು ಅವರು ಟೀಕಿಸಿದರು.ಬಿಜೆಪಿ ವಿರುದ್ಧ ಟೀಕಿ ಮಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ವಿರುದ್ಧ ಕಿಡಿಕಾರಿದ ಆರ್. ಅಶೋಕ್, ಶೆಟ್ಟರ್ ೪೦ ವರ್ಷ ಬಿಜೆಪಿಯಲ್ಲಿದ್ದರು. ಆಗ ಯಾವ ನೈತಿಕತೆ ಇತ್ತು. ಪಕ್ಷದಲ್ಲಿ ಎಲ್ಲಾ ಸ್ಥಾನಮಾನಗಳನ್ನು ಅನುಭವಿಸಿ, ಈಗ ಕಾಂಗ್ರೆಸ್‌ಗೆ ಹೋಗಿ ನಮ್ಮನ್ನು ತೆಗಳಿ, ಕಾಂಗ್ರೆಸ್‌ನ್ನು ಹೊಗಳುತ್ತಿದ್ದಾರೆ ಎಂದು ಹರಿಹಾಯ್ದರು
ಸದಾನಂದಗೌಡ ವಾಗ್ದಾಳಿ
ರಾಜ್ಯದ ಪರಿಸ್ಥಿತಿ ಅಧೋಗತಿಗೆ ಬಂದಿದೆ. ದೇಶದ ಜನ ನಗುವಂತಹ ಪರಿಸ್ಥಿತಿಗೆ ರಾಜ್ಯ ಬಂದಿದೆ. ಈ ನೋವು ನಮಗಿದೆ. ಕಾಂಗ್ರೆಸ್ ಆಡಳಿತ ಮಾಡಿದರೆ ದೇಶ, ರಾಜ್ಯ ಉದ್ಧಾರವಾಗಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕಾಂಗ್ರೆಸ್ ರಕ್ತದಲ್ಲೇ ಭ್ರಷ್ಟಾಚಾರ ಲೂಟಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದರು.
ಅಶ್ವತ್ಥ್‌ನಾರಾಯಣ ಟೀಕೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ರಕ್ತ ಹೀರುತ್ತಿದೆ. ೪ ತಿಂಗಳಲ್ಲೇ ೪೫ ಅವತಾರ ತೋರಿದ್ದಾರೆ. ಈ ಸರ್ಕಾರದಲ್ಲಿ ಒಬ್ಬರು ಇದ್ದಾರೆ, ಅವರು ಬ್ರ್ಯಾಂಡ್ ಆಗಿ ಹೋಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಎಷ್ಟು ಸಾರಿ ಹೋದರೂ ಅಷ್ಟೇನೆ ಅಂದುಕೊಂಡು ಬಿಟ್ಟಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿದ್ದನ್ನು ಪ್ರಸ್ತಾಪಿಸಿ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಟೀಕಿಸಿದರು.ಐಟಿ ದಾಳಿಯಲ್ಲಿ ಸಿಕ್ಕಿರುವ ಭ್ರಷ್ಟಾಚಾರಾದ ಹಣವನ್ನು ಒಪ್ಪಿಕೊಂಡು ಇಡೀ ಸಚಿವ ಸಂಪುಟ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಟಿಎಂ ಓನರ್ ಆಗಿದ್ದಾರೆ. ಎಟಿಎಂ ಎಲ್ಲಿ, ಹೇಗೆ ಫಿಕ್ಸ್ ಮಾಡಬೇಕು ಎಂದು ಹೇಳಿಕೊಟ್ಟವರು ಅವರೇ. ಕಲೆಕ್ಷನ್ ಹೇಗೆ ಎಂದು ಹೇಳಿಕೊಡಲು ವೇಣುಗೋಪಾಲ್ ನಿನ್ನೆ ಬಂದಿದ್ದಾರೆ. ಮುಂದಿನ ಚುನಾವಣೆಗೆ ಸಚಿವರು ಎಷ್ಟು ಹಣ ಕೊಡಬೇಕು ಎಂಬುದನ್ನು ಹೈಕಮಾಂಡ್ ಫಿಕ್ಸ್ ಮಾಡಿ ಕಳುಹಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿತವಾದಿ ಎಂದುಕೊಂಡಿದ್ದೆವು. ಆದರೆ ಅವರು ಮೊಯ್ಲಿಗಿಂತಲೂ ದೊಡ್ಡ ಸುಳ್ಳುಗಾರರಾಗಿದ್ದಾರೆ. ಸುಳ್ಳು ಹೇಳುವುದನ್ನು ಸಿದ್ದರಾಮಯ್ಯ ಜನತಾದಳದಲ್ಲಿ ಇದ್ದಾಗಲೇ ಕಲಿತಿದ್ದರೋ, ಕಾಂಗ್ರೆಸ್‌ಗೆ ಬಂದು ಕಲಿತರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.