ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಲಬುರಗಿ,ಜು 22: ರಾಜ್ಯದ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ,ಸರಕಾರದ ವಿವಿಧ ವೈಫಲ್ಯಗಳನ್ನು ಖಂಡಿಸಿ ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು,ಈ ಹಿನ್ನೆಲೆಯಲ್ಲಿ ನಗರದಲ್ಲಿಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಕುಸಿದಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 48 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ಕೊಲೆಗಳು ನಡೆದಿವೆ. ವಿದ್ಯುತ್ ಸೇರಿದಂತೆ ಜೀವನಾವಶ್ಯಕ ಬೆಲೆಗಳು ತೀವ್ರವಾಗಿ ಹೆಚ್ಚಾಗಿದ್ದು, ಜನರು ಜೀವನ ಮಾಡುವುದೇ ದುಸ್ತರವಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಬಜೆಟ್ ಅಲ್ಪಸಂಖ್ಯಾತರ ಪರ ಮಾತ್ರವಲ್ಲ; ಹಿಂದೂಗಳ ವಿರೋಧಿ, ರೈತ ವಿರೋಧಿ, ನೀರಾವರಿ ವಿರೋಧಿ ಮತ್ತು ಶಿಕ್ಷಣ ವಿರೋಧಿಯಾಗಿದೆ. ಕೇಂದ್ರ ಸರಕಾರವನ್ನು ತೆಗಳುವ ಬಜೆಟ್ ಇದಾಗಿದೆ
ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಭಯೋತ್ಪಾದನಾ ಚಟುವಟಿಕೆಗಳು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರುವ ಸಾಧ್ಯತೆ ಇದ್ದು, ಈ ಪ್ರಕರಣವನ್ನು ತನಿಖೆಗಾಗಿ ಎನ್‍ಐಎಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿದರು.ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸಭಾಧ್ಯಕ್ಷರು ವಿಧಾನಮಂಡಲದ ಕಲಾಪವನ್ನು ಸರ್ವಾಧಿಕಾರಿಯಂತೆ ನಡೆಸಿದ್ದಾರೆ. ಅಲ್ಲದೆ ಪ್ರತಿಪಕ್ಷವನ್ನು ಹತ್ತಿಕ್ಕಲಾಗಿದೆ. ವಿಧಾನಮಂಡಲದಲ್ಲಿ ಸಭಾಧ್ಯಕ್ಷರು ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದ್ದು ಖಂಡನೀಯ ಎಂದು ಹರಿಹಾಯ್ದರು.
ಪ್ರತಿಭಟನೆಯಲ್ಲಿ ರಾಜಕುಮಾರ ಪಾಟೀಲ ತೇಲ್ಕೂರ,ಶಿವರಾಜ ಪಾಟೀಲ ರದ್ದೇವಾಡಗಿ,ಸಿದ್ದಾಜಿ ಪಾಟೀಲ, ಬಸವರಾಜ ಮತ್ತಿಮಡು,ಚಂದು ಪಾಟೀಲ,ಮಣಿಕಂಠ ರಾಠೋಡ,ಶಿವಾನಂದ ಪಿಸ್ತಿ,ಅರುಣಕುಮಾರ ಪಾಟೀಲ,ರಾಘವೇಂದ್ರ ಕುಲಕರ್ಣಿ,ಮಲ್ಲು ಉದನೂರ,ರಾಜು ನಾಗನಳ್ಳಿ,ಮುಕುಂದ ದೇಶಪಾಂಡೆ,ಶರಣಪ್ಪ ತಳವಾರ,ಡಾ.ಇಂದಿರಾ ಶಕ್ತಿ,ವಿದ್ಯಾಸಾಗರ ಕುಲಕರ್ಣಿ,ಶಶಿಕಲಾ ತೆಂಗಳಿ,ದಯಾಘನ ಧಾರವಾಡಕರ್ ಅವರು ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಭಾಗಿಯಾದರು.