ಕಾಂಗ್ರೆಸ್ ವಿರುದ್ಧ ನಾಗೇಶ್ ಕಿಡಿ

ಬೆಂಗಳೂರು,ನ.೧೫- ಮುಸ್ಲಿಂ ಸಮುದಾಯದ ಓಲೈಕೆಗಾಗಿ ಅವರ ಮತಕ್ಕಾಗಿ ಕಾಂಗ್ರೆಸ್ ಬಣ್ಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕಿಡಿಕಾರಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಹೊಡೆಯಬೇಕು ಎಂಬುದನ್ನು ನಾವು ತೀರ್ಮಾನಿಸಿಲ್ಲ. ಆರ್ಕಿಟೆಕ್ಚರ್‌ಗಳು ಯಾವ ಬಣ್ಣ ಹೇಳುತ್ತಾರೋ ಆ ಬಣ್ಣವನ್ನು ಹೊಡೆಯಲಾಗುತ್ತದೆ ಎಂದರು.
ಕಾಂಗ್ರೆಸ್‌ನವರು ವಿರೋಧ ಮಾಡುತ್ತಾರೆ ಎಂದು ನಾವು ಕೇಸರಿ ಬಣ್ಣ ಹೊಡೆಯದೇ ಇರುವುದಿಲ್ಲ. ಹಾಗೆಯೇ ಶಾಲೆಗಳಲ್ಲಿ ಕಾಂಗ್ರೆಸ್ ಧ್ಯಾನಕ್ಕೆ ವಿರೋಧ ಮಾಡುತ್ತದೆ ಎಂದೂ ಧ್ಯಾನ ನಿಲ್ಲಿಸಲೂ ಆಗಲ್ಲ, ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಇದಕ್ಕೆಲ್ಲ ವಿರೋಧ ಮಾಡುತ್ತಿದೆ. ಇಂತಹುದ್ದಕ್ಕೆಲ ನಾವು ಹೆದರಲ್ಲ ಎಂದರು.ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಬಣ್ಣ ಕೂಡ ಕೇಸರಿ ಬಣ್ಣ, ಕಾಂಗ್ರೆಸ್‌ನ ಕೇಸರಿ ವಿರೋಧ ಸರಿಯಲ್ಲ,ಅಧಿಕಾರದಲ್ಲಿದ್ದಾಗ ಯಾವ ಸಾಧನೆಯನ್ನೂ ಮಾಡದ ಕಾಂಗ್ರೆಸ್, ಜನರಿಗೆ ಮುಖ ತೋರಿಸಲಾಗದೆ ಎಲ್ಲವನ್ನೂ ವಿವಾದ ಮಾಡುವ ಪ್ರಯತ್ನ ನಡೆಸಿದೆ ಎಂದು ಅವರು ಹರಿಹಾಯ್ದರು.ಮುಸ್ಲಿಂ ಮತಕ್ಕಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಇದು ಸರಿಯಲ್ಲ, ಎಲ್ಲದರಲ್ಲೂ ರಾಜಕಾರಣ ಮಾಡುವುದು ಶೋಭೆ ತರಲ್ಲ ಎಂದು ಅವರು ಹೇಳಿದರು.ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡಿ ಪ್ರೌಢಶಾಲಾ ಶಿಕ್ಷಕರನ್ನಾಗಿ ನೇಮಿಸಲು ಅಗತ್ಯಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.