ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಬೆಂಗಳೂರು, ಜೂ.೧೪-ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಭೆ ನಡೆಸಿರುವ ಬಗ್ಗೆ ಆಕ್ರೋಶ ಹೆಚ್ಚಾಗಿದ್ದು, ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟು ದಿನ ಸುಳ್ಳು ಹೇಳಿಕೊಂಡು ಬದುಕುತ್ತೀರಾ ಜನ ಮತ ಹಾಕಿದ್ದು ನಿಮಗೋ ಅಥವಾ ದಶಪತ ಕಾಂಗ್ರೆಸ್ ಹೈಕಮಾಂಡ್ ಗೋ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರು ಅಧಿಕಾರಿಗಳಿಗೆ ಏನು ಹೇಳಿದ್ದಾರೆ ಗೊತ್ತಿದೆ. ಕಾಂಗ್ರೆಸ್ ಗೆ ಎಂತಹ ದುರ್ಗತಿ ಬಂದಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ಹೈಕಮಾಂಡ್ ಹಂಗಿನಲ್ಲಿ ಸರ್ಕಾರ ಇರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಅವರು ಕಿಡಿಕಾಡಿದ್ದಾರೆ.
ಅದು ಅಲ್ಲದೆ, ಸಭೆಯಲ್ಲಿದ್ದ ನಿಮ್ಮ ಮಂತ್ರಿ ಆ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಸುರ್ಜೆವಾಲಾ ಅವರು ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಆಗಿದ್ದು, ಕಾಂಗ್ರೆಸ್ ನಾಯಕರಿಗೆ ಮಾರ್ಗದರ್ಶನ ಕೊಟ್ಟು ಲೂಟಿ ಮಾಡಲು ಬಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.