ಕಾಂಗ್ರೆಸ್ ವಿರುದ್ದ ಬಿ.ಎಸ್.ಯಡಿಯೂರಪ್ಪ ಟೀಕಾಪ್ರಹಾರ!

ಶಿವಮೊಗ್ಗ, ನ. 28: ಮುಂದಿನ ಯಾವುದೇ ಚುನಾವಣೆಗೆ ಕಾಂಗ್ರೆಸ್ ನಾಯಕರು, ಬಿಜೆಪಿ ವಿರುದ್ದ ಕಣಕ್ಕಿಳಿಯಲು ಹಿಂದೇಟು ಹಾಕುವಂತಹ ವಾತಾವರಣ ಸೃಷ್ಟಿಯಾಗಬೇಕು. ಅದು ವಿಧಾನ ಪರಿಷತ್ ಚುನಾವಣೆಯಿಂದಲೇ ಆರಂಭವಾಗಬೇಕು. ಆ ಮಟ್ಟಕ್ಕೆ ಪಕ್ಷ ಸಂಘಟಿಸುವ ಕಾರ್ಯವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಮುಖಂಡರು – ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.  ನಗರದ ಗಾಯತ್ರಿ ಮಾಂಗಲ್ಯ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಜನಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ವಿಧಾನ ಪರಿಷತ್ ಚುನಾವಣೆಗಳಲ್ಲಿ, ಪ್ರಚಾರ ನಡೆಸದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಜಯ ಎಂಬಂತಹ ವಾತಾವರಣವಿತ್ತು. ಆದರೆ ಬಿಜೆಪಿ ಬಲಿಷ್ಠವಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದೇ ಕಷ್ಟ ಎನ್ನುವ ಪರಿಸ್ಥಿತಿಯಿದೆ ಎಂದರು. ಚುನಾವಣೆ ನಡೆಯುತ್ತಿರುವ ಸ್ಥಳಗಳಲ್ಲಿ ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಹೆಚ್ಚಿದ್ದಾರೆ. ಇದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಪೂರಕ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳ ಜನಪರ ಆಡಳಿತ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಿ.ಎಸ್.ಅರುಣ್ ಜಯ ಖಚಿತವಾಗಿದೆ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಾಯಕರು, ಕಾರ್ಯಕರ್ತರು ಮೈಮರೆಯಬಾರದು. ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಬೇಕು. ಅತ್ಯಂತ ಜಾಗರೂಕತೆಯಿಂದ ಚುನಾವಣೆ ಎದುರಿಸಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರುಗಳಾದ ಕೆ.ಬಿ.ಅಶೋಕನಾಯ್ಕ್, ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ ಸೇರಿದಂತೆ ಮೊದಲಾದವರಿದ್ದರು.