ಕಾಂಗ್ರೆಸ್ ವಿರುದ್ದ ಜಫ್ರುಲ್ಲಾ ಗರಂ

ಬೆಂಗಳೂರು, ಮಾ.೩೦- ಜೆಡಿಎಸ್ ಪಕ್ಷವನ್ನು ಪದೇ ಪದೇ ಬಿಜೆಪಿಯ ’ಬಿ-ಟೀಮ್ ಎಂದು ಹೇಳುವ ಕಾಂಗ್ರೆಸ್ ಗೆ ನಾಚಿಕೆ ಆಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಟೀಕಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಹಾಕುತ್ತಲೇ ಕಾಂಗ್ರೆಸ್ ತಾನು ಮುಸ್ಲಿಮರ ರಕ್ಷಕ ಎಂದು ಎದೆತಟ್ಟಿಕೊಂಡು ಮುಂದೆ ಬಂದಿದೆ.ಆದರೆ,ಅವರ ನಂಬಿಕೆ ಸುಳ್ಳು ಮುಸ್ಲಿಮರು ಇವರ ಜೊತೆಗಿಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದರು.ಆಗ ಈ ಕಾಂಗ್ರೆಸ್ ನಾಯಕರು ಏಕೆ ಗಟ್ಟಿ ಧ್ವನಿಗೂಡಿಸಿಲ್ಲ.ಅಷ್ಟೇ ಅಲ್ಲದೆ, ಅಂದು ಸರ್ಕಸ್ ಕಾಮಿಡಿಗಳಾಗಿ ಸುಮ್ಮನೆ ಇದ್ದರು ಎಂದು ವಾಗ್ದಾಳಿ ನಡೆಸಿದರು.
ನೀವೂ ನೈಜವಾಗಿ ಮುಸ್ಲಿಮರ ಪರವಾಗಿದ್ದರೆ, ಏಕೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿಲ್ಲ ಎಂದ ಅವರು, ನಮ್ಮ ರಾಜ್ಯ, ನಮ್ಮ ನೆಲ, ನಮ್ಮ ಪಕ್ಷ, ನಮ್ಮ ಅಭ್ಯರ್ಥಿ. ಇದರಲ್ಲಿ ಜೆಡಿಎಸ್ ಯಾರ ಅಪ್ಪಣೆಗೆ ಕಾಯಬೇಕಾಗಿಲ್ಲ. ಯಾವ ದೊಣ್ಣೆ ನಾಯಕನ ಆಜ್ಞೆ ನಮಗೆ ಬೇಕಾಗಿಲ್ಲ. ಜನರಿಗೆ ಬೇಕಾದ ಅಭ್ಯರ್ಥಿಗಳನ್ನು ನಾವು ಹಾಕುತ್ತೇವೆ. ಅದರಲ್ಲಿ ನಮಗೆ ಧರ್ಮ ನಗಣ್ಯ. ಪ್ರತಿಯೊಂದರಲ್ಲೂ ಹಿಂದೂ-ಮುಸ್ಲಿಂ ಎಂದು ಹುಡುಕುವವರಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಜೆಡಿಎಸ್ ನಲ್ಲಿಯೇ ಇದ್ದು, ಬೆಳೆದ ನಾಯಕ.ಹೀಗಿದ್ದರೂ, ಇದೀಗ ಜೆಡಿಎಸ್ ಕುರಿತು ಇಲ್ಲಸಲ್ಲದ ಸುಳ್ಳು ಹೇಳುವುದು ಸರಿಯಲ್ಲ. ಅವರು ಒಮ್ಮೆ ಹಿಂದಕ್ಕೆ ತಿರುಗಿ ನೋಡಿ, ಮಾತನಾಡಲಿ ಎಂದು ತಿಳಿಸಿದರು.
ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ. ಅದಕ್ಕಾಗಿಯೇ ಮುಸ್ಲಿಮರನ್ನು ಕಾಂಗ್ರೆಸ್ ನಮ್ಮ ಮತ ಎನ್ನುತ್ತದೆ. ಕಾಂಗ್ರೆಸ್‌ನ ಇಂಥ ತಪ್ಪುಗಳಿಂದಲೇ ಬಿಜೆಪಿ ಈ ಹಂತಕ್ಕೆ ಬೆಳೆದಿದೆ. ದೇಶದಲ್ಲಿ ಕೋಮು ಭಾವನೆಗಳು ಈ ಮಟ್ಟಕ್ಕೆ ಕೆರಳಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಮಾದಗಳಿವೆ ಎಂದು ಅವರು ಹೇಳಿದರು.