ಕಾಂಗ್ರೆಸ್ ರ್ಯಾಲಿಯಲ್ಲಿ ಮಹಿಳೆಯರಿಗೆ ಎರಡು ನೂರು ರೂ. ಹಣ ಹಂಚಿಕೆ: ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಗಾಢ ಮೌನ

ವಿಜಯಪುರ,ಏ.16:ವಿಜಯಪುರ ಲೋಕಸಭಾ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂಬಂಧ ಏರ್ಪಡಿಸಿದ ರ್ಯಾಲಿಯಲ್ಲಿ ಲಂಬಾಣಿ ಮಹಿಳೆಯರಿಗೆ ರಾಜಾರೋಷವಾಗಿ ಹಣ ಹಂಚಿರುವ ಪ್ರಸಂಗ ನಡೆದಿದೆ.
ನಗರದಲ್ಲಿ ಸೋಮವಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬೃಹತ್ ರ್ಯಾಲಿಯಲ್ಲಿ ಲಂಬಾಣಿ ಮಹಿಳೆಯರಿಗೆ ಹಣ ಹಂಚಿಕೆ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೃತ್ಯ ಮಾಡುತ್ತಿದ್ದ ಪ್ರತಿಯೊಬ್ಬ ಲಂಬಾಣಿ ಮಹಿಳೆಯರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಚುನಾವಣೆ ನೀತಿ ಸಂಹಿತೆ ಪರಿವೇ ಇಲ್ಲದೆ ಎರಡು ನೂರು ರೂಪಾಯಿ ಹಣವನ್ನು ಹಂಚಿದ್ದಾರೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿ ಹಣ ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗ್ರಾಸವಾಗಿದೆ. ಅಲ್ಲದೆ ಪೊಲೀಸರು ರ್ಯಾಲಿಯಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದರೂ ಹಣ ಹಂಚಿಕೆ ನಮಗೇನೂ ಸಂಬಂಧಿಸಿಲ್ಲ ಎನ್ನುವಂತೆ ಜಾಣ ಕುರುಡತನ ಮೆರೆದರು. ಏತನ್ಮಧ್ಯೆ ಜಿಲ್ಲಾಡಳಿತದ ಚುನಾವಣೆಯ ಕಾರ್ಯ ವೈಖರಿ ಬಗ್ಗೆ ಕೂಡಾ ಇಲ್ಲದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆದ ಬೃಹತ್ ರ್ಯಾಲಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರು, ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ದರು.