ಕಾಂಗ್ರೆಸ್ ಯಾಸೀನ್, ಬಿಜೆಪಿ ಶಿವರಾಜ ಪಾಟೀಲ್‌ರಿಗೆ ತಿರಸ್ಕಾರ – ಜಾದಳ ನಿಖತ್ ಜೈಕಾರ

ಜಾದಳ ಅಭ್ಯರ್ಥಿಗೆ ೧೨೨೪, ಕಾಂಗ್ರೆಸ್ ಅಭ್ಯರ್ಥಿಗೆ ೮೧೮ – ಬಿಜೆಪಿ ಬೆಂಬಲಿತ ಅಭ್ಯರ್ಥಿ ೩೫೫
ರಾಯಚೂರು.ಮಾ.೩೧- ತೀವ್ರ ಕುತೂಹಲ ಕೆರಳಿಸಿದ ವಾರ್ಡ್ ೮ ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ, ಮಂತ್ರಗಳ ಮಧ್ಯೆ ಜಾದಳ ಅಭ್ಯರ್ಥಿ ನಿಖತ್ ಸಲ್ಮಾ ಅವರು ೪೦೬ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಪತಿಯ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾ.೨೯ ರಂದು ಈ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಇಂದು ಮುಂಜಾನೆ ಮತ ಎಣಿಕೆ ಆರಂಭಗೊಂಡು ಕೇವಲ ೧೫, ೨೦ ನಿಮಿಷಗಳಲ್ಲಿ ಫಲಿತಾಂಶ ಪ್ರಕಟಗೊಂಡಿತು. ಈ ಫಲಿತಾಂಶದಲ್ಲಿ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮೂಲಕ ರಾಜಕೀಯದ ಆಟವಾಡಿದ ಶಾಸಕ ಡಾ.ಶಿವರಾಜ ಪಾಟೀಲ್, ಅಲ್ಪಸಂಖ್ಯಾತರ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯದಿಂದ ಕಾಂಗ್ರೆಸ್ ಗೆಲ್ಲಿಸುವ ಅಹಂ ವರ್ತನೆಯಲ್ಲಿದ್ದ ಮಾಜಿ ಶಾಸಕ ಸೈಯದ್ ಯಾಸೀನ್ ಇಬ್ಬರನ್ನು ಅಲ್ಲಿಯ ಜನ ತಿರಸ್ಕರಿಸುವ ಮೂಲಕ ಅನುಕಂಪವೇ ಆಧಾರವಾಗಿ ಸೈಯದ್ ಶಾಲಂ (ಮಕ್ಬೂಲ್) ಅವರ ಪತ್ನಿ ನಿಖತ್ ಸಲ್ಮಾ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಿದ್ದಾರೆ. ಜಾದಳದ ನಿಖತ್ ಸಲ್ಮಾ ಅವರು ೧೨೨೪, ಕಾಂಗ್ರೆಸ್ಸಿನ ಶಂಶುದ್ದೀನ್ ೮೧೮ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ನಜೀಮಾ ಬೇಗಂ ೩೫೫ ಮತ ಪಡೆದಿದ್ದರೇ, ನೂರ್ ೩೪೫, ಮಹ್ಮದ್ ಗೌಸ್ ಮೊಹಿನುದ್ದೀನ್ (ಎಸ್‌ಡಿಪಿಐ) ೧೫೩ ಹಾಗೂ ಮಹ್ಮದ್ ಶರೀಫ್ ಕೇವಲ ೩೬ ಮತಗಳನ್ನು ಮಾತ್ರ ಪಡೆದಿದ್ದಾರೆ.
ನಗರ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕರೆಂದು ತೋರಿಸಿಕೊಳ್ಳುವ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸಂಪೂರ್ಣ ಶ್ರೇಯಸ್ಸು ತಮ್ಮೊಬ್ಬರಿಗೆ ಧಕ್ಕಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ಸಿನ ಇತರೆ ನಾಯಕರು ಪ್ರಚಾರಕ್ಕೆ ಬಾರದಂತೆ ಅದರಲ್ಲೂ ವಿಶೇಷವಾಗಿ ತನ್ನ ವಿರೋಧಿ ಬಣ ಪ್ರಚಾರಕ್ಕೆ ಕಾಣದಂತೆ ನಿರ್ಬಂಧಿಸಿದ ಸೈಯದ್ ಯಾಸೀನ್ ಅವರನ್ನು ವಾರ್ಡ್ ೮ ರ ಮತದಾರರು ತಿರಸ್ಕರಿಸುವ ಮೂಲಕ ಜಾದಳ ಪಕ್ಷದ ಮಹಿಳೆಯನ್ನು ಗೆಲ್ಲಿಸುವ ಮೂಲಕ ಯಾಸೀನ್ ಅವರ ಪ್ರಶ್ನಾತೀತತೆ ನಾಯಕತ್ವವನ್ನೇ ಪ್ರಶ್ನಿಸಿದ್ದಾರೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಅಲ್ಪಸಂಖ್ಯಾತರ ಈ ಕ್ಷೇತ್ರದಲ್ಲಿ ಸುಮಾರು ೬೦೦ ಹಿಂದೂ ಮತದಾರರ ಪ್ರಾಬಲ್ಯದ ಮೂಲಕ ಆಪ್ತಮಿತ್ರರ ಒಬ್ಬರ ಪತ್ನಿ ನಜೀಮಾ ಬೇಗಂ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್, ಜಾದಳಕ್ಕೆ ಚಳ್ಳೆ ಹಣ್ಣು ತಿನ್ನಿಸಿ, ತಮ್ಮ ಚಾಣುಕ್ಯತನವನ್ನು ಪ್ರದರ್ಶಿಸುವ ಪ್ರಯತ್ನಕ್ಕೆ ಸ್ವತಃ ಹಿಂದೂ ಮತದಾರರು ಮನ್ನಣೆ ನೀಡದೇ, ಅನುಕಂಪ ಮತ್ತು ಮೃತ ಮಕ್ಬೂಲ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಅವರ ಪತ್ನಿ ನಿಖಲ್ ಸಲ್ಮಾ ಅವರ ಗೆಲುವಿಗೆ ಮತ ನೀಡಿದ್ದಾರೆಂದು ವಿಶ್ಲೇಷಣೆ ಮಾಡಲಾಗುತ್ತದೆ.
ಜಾದಳ ಪಕ್ಷ ಈ ಸಲ ಅತ್ಯಂತ ಸಂಘಟಿತವಾಗಿ ಮತ್ತು ಎಲ್ಲಾ ನಾಯಕರನ್ನೊಳಗೊಂಡಂತೆ ಪ್ರಚಾರ ಕಾರ್ಯ ನಿರ್ವಹಿಸಿತು. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಇತ್ತೀಚಿನ ಸಭೆಯ ತೀರ್ಮಾನದಂತೆ ಈ ಚುನಾವಣೆಯಲ್ಲಿ ಪ್ರತಿಯೊಬ್ಬರು ಮುಂಚೂಣಿಯಾಗಿ ಪ್ರಚಾರ ನಡೆಸಿ, ಭಾರೀ ಅಂತರದಿಂದ ಪಕ್ಷದ ಅಭ್ಯರ್ಥಿ ಜಯಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಹಿರಿಯ ಮುಖಂಡರು ಮತ್ತು ಚುನಾವಣಾ ಉಸ್ತುವಾರಿ ನಾಯಕರಾದ ಯೂಸೂಫ್ ಖಾನ್, ಕಾರ್ಯಾಧ್ಯಕ್ಷ ಎನ್.ಶಿವಶಂಕರ್ ಸೇರಿದಂತೆ ಇತರರು ಚುನಾವಣೆಯಲ್ಲಿ ಒಗ್ಗಟ್ಟಾಗಿ ನಡೆಸಿದ ಪ್ರಚಾರ ಎರಡು ರಾಷ್ಟ್ರೀಯ ಪಕ್ಷಗಳು ಸೋಲಿಗೆ ಶರಣಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನಾಧರಿಸಿ, ಈ ಕ್ಷೇತ್ರದ ಟಿಕೆಟ್ ಪಡೆಯುವ ಉದ್ದೇಶದೊಂದಿಗೆ ಕಾಂಗ್ರೆಸ್ ಗೆಲುವು ನಿರೀಕ್ಷಿಸಿದ್ದ ಮಾಜಿ ಶಾಸಕ ಸೈಯದ್ ಯಾಸೀನ್ ಅವರನ್ನು ತಮ್ಮದೇ ಸಮುದಾಯದ ಜನ ತಿರಸ್ಕರಿಸಿರುವುದು ಅವರ ನಾಯಕತ್ವ ಈಗ ಅಲ್ಪಸಂಖ್ಯಾತರೇ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಚರ್ಚೆಗೂ ಈ ಫಲಿತಾಂಶ ದಾರಿ ಮಾಡಿದೆ. ನಿಖತ್ ಸಲ್ಮಾ ಅವರು ಕಾಂಗ್ರೆಸ್ ಟಿಕೆಟ್ ಕೇಳಿ ಪಕ್ಷದ ಬಾಗಿಲು ತಟ್ಟಿದರು. ಆದರೆ, ಸೈಯದ್ ಯಾಸೀನ್ ಅವರೇ ನಿಖತ್ ಸಲ್ಮಾ ಅವರಿಗೆ ಟಿಕೆಟ್ ಕೈತಪ್ಪುವಂತೆ ಮಾಡಿರುವುದು ಈ ಫಲಿತಾಂಶ ಕೈತಪ್ಪಲು ಕಾರಣವೆನ್ನುವ ಅಭಿಪ್ರಾಯಗಳು ಆ ಪಕ್ಷದ ಅಲ್ಪಸಂಖ್ಯಾತರ ಮುಖಂಡರ ಮಧ್ಯೆ ಕೇಳಿ ಬರುವಂತೆ ಮಾಡಿದೆ.
ಒಟ್ಟಾರೆಯಾಗಿ ವಾರ್ಡ್ ೮ ರ ಫಲಿತಾಂಶ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಶಾಕ್ ನೀಡಿದ್ದರೇ, ಜಾದಳಕ್ಕೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಸ್ತಿತ್ವದ ದೃಢತೆಯನ್ನು ಮನವರಿಕೆ ಮಾಡುವ ಮಹತ್ವದ ತೀರ್ಪಾಗಿ ಹೊರ ಹೊಮ್ಮಿದ್ದು, ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾವ ರೀತಿಯ ರಾಜಕೀಯ ನೆರವಾಗಲಿದೆ ಎನ್ನುವುದು ಗಮನಾರ್ಹವಾಗಿದೆ.