ಕಾಂಗ್ರೆಸ್ ಮುಳುಗುತ್ತಿರುವ ಹಡಗು

ಕಲಬುರಗಿ ಏ 11: ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಡಿ ಕೆ ಶಿವಕುಮಾರ ಅದರ ಚಾಲಕ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ ಅವರು ಹರಿ ಹಾಯ್ದರು.
ಬಸವಕಲ್ಯಾಣ ಚುನಾವಣೆ ಪ್ರಚಾರಕ್ಕೆ ತೆರಳುವದಕ್ಕೆ ಮುಂಚೆ ಕಲಬುರಗಿಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ,ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮತ್ತು ಹಜ್ ,ಮೂಲಭೂತ ಸೌಕರ್ಯ ಸಚಿವ ಆನಂದಸಿಂಗ್ ಅವರು ಪಾಲ್ಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಸ್ ಟಿ ಸೋಮಶೇಖರ ಅವರು ಮಾತನಾಡಿದರು.
ಇನ್ನೆರಡು ರಂಧ್ರ ಬಿದ್ದರೆ ಕಾಂಗ್ರೆಸ್ ಹಡಗು ಮುಳುಗೇ ಹೋಗುತ್ತದೆ. ಆ ರಂಧ್ರ ಕೊರೆಯಲು ಆ ಪಕ್ಷದ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಉಪಚುನಾವಣೆ:
ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಅಲೆ ಇದೆ.ನಮ್ಮ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲುವದು ನಿಶ್ಚಿತ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬಸವಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಲ್ಲಿ ಉಳಿಸುವದು ಅಥವಾ ಬಿಡುವದು ಈ ವಿಚಾರ ನಮ್ಮ ವರಿಷ್ಠರಿಗೆ ಸಂಬಂಧಿಸಿದ್ದು .ಬಿಜೆಪಿ ರಾಷ್ಟ್ರೀಯ ಸಿದ್ಧಾಂತದ ಶಿಸ್ತಿನ ಪಕ್ಷ. ಯಾರೂ ತಮ್ಮ ಚೌಕಟ್ಟು ಮೀರಿ ಅನುಚಿತವಾಗಿ ವರ್ತಿಸಬಾರದು ಎಂದು ಸಚಿವ ಎಸ್.ಟಿ ಸೋಮಶೇಖರ ಅವರು ಸೂಚ್ಯವಾಗಿ ನುಡಿದರು.