
ಕಲಬುರಗಿ,ಜು.16-ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ್ ಕೊಲೆಯ ಪ್ರಮುಖ ಆರೋಪಿ ವಿಜಯಕುಮಾರ ಹಳ್ಳಿ ಮೇಲೆ ಪೆÇಲೀಸರು ಫೈರಿಂಗ್ ಮಾಡಿದ್ದಾರೆ. ಶಹಬಾದ್ ಪಟ್ಟಣದ ಹೊರವಲಯದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದೆ.
ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಮಹಿಳಾ ಪಿ.ಎಸ್.ಐ ಸುವರ್ಣಾ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 11ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆ ನಡೆದಿತ್ತು.
ಪ್ರಕರಣದ ಆರೋಪಿ ವಿಜಯಕುಮಾರ ಹಳ್ಳಿಯನ್ನು ಶುಕ್ರವಾರ ಬಂಧಿಸಿದ ಪೆÇಲೀಸರು, ಇಂದು ಬೆಳಗ್ಗೆ 7-30ರ ಸುಮಾರಿಗೆ ಕೊಲೆಗೆ ಬಳಸಿದ ಮಾರಕಾಸ್ತ್ರವೊಂದನ್ನು ಬಿಸಾಡಿದ ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು.
ತಾನು ಬಿಸಾಡಿದ ಮಚ್ಚು ತೋರಿಸಿದ ಆರೋಪಿ, ಅದೇ ಮಚ್ಚಿನಿಂದ ಪಿ.ಎಸ್.ಐ ಸುವರ್ಣಾ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನಿಖಾಧಿಕಾರಿಯಾದ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ವಿಜಯಕುಮಾರಗೆ ಶರಣಾಗುವಂತೆ ಹೇಳಿದ್ದಾರೆ. ಆದರೂ ಆತ ತಪ್ಪಿಸಿಕೊಳ್ಳಲು ಯತ್ನ ಮುಂದುವರೆಸಿದಾಗ ಆರೋಪಿಯ ಬಲಗಾಲಿಗೆ ಒಂದು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಎರಡು ವರ್ಷದ ಹಿಂದೆ ಗಿರೀಶ ಕಂಬಾನೂರ ಸಹೋದರ ಸತೀಶ ಕೊಲೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿಯೂ ವಿಜಯಕುಮಾರ ಹಳ್ಳಿ ಆರೋಪಿಯಾಗಿದ್ದ. ಸತೀಶ ಕಂಬಾನೂರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಜಯಕುಮಾರ ಜೈಲಿನಿಂದಲೇ ಕಂಬಾನೂರ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಕೊಲೆ, ಜೀವ ಬೆದರಿಕೆ ಸೇರಿದಂತೆ ವಿಜಯ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಿವೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.
ಹಿನ್ನೆಲೆ
ಜು.11 ರಂದು ಕಾಂಗ್ರೆಸ್ ಮುಖಂಡ ಗಿರೀಶ್ ಕಂಬನೂರ್ ಅವರನ್ನು ಶಹಾಬಾದ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಗಿರೀಶ್ ರೈಲ್ವೆ ಟಿಕೆಟ್ ಬುಕ್ ಮಾಡಲೆಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಮಾರಕಾಸ್ತ್ರವನ್ನು ದೇಹದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಹಾಡುಹಗಲೇ ನಡೆದ ಈ ಕೊಲೆ ಪ್ರಕರಣದಿಂದ ಶಹಾಬಾದ ನಗರದ ಜನತೆ ಬೆಚ್ಚಿಬಿದ್ದಿದ್ದರು.
ಎರಡು ವರ್ಷದ ಹಿಂದೆ ಗಿರೀಶ್ ಸಹೋದರ ಸತೀಶ್ ಕಂಬನೂರ್ ಹತ್ಯೆ ಮಾಡಲಾಗಿತ್ತು. ಈ ಎರಡೂ ಕೊಲೆಗೆ ಹಳೆ ವೈಷಮ್ಯವೇ ಕಾರಣವೆನ್ನಲಾಗಿದೆ. ಕೊಲೆಯಾದ ಗಿರೀಶ್ ಕಂಬನೂರ್ ಪತ್ನಿ ಸದ್ಯ ಶಹಾಬಾದ ನಗರ ಸಭೆ ಅಧ್ಯಕ್ಷರಾಗಿದ್ದಾರೆ.
ಗಿರೀಶ್ ಕಂಬನೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವಿಜಯಕುಮಾರನನ್ನು ನಿನ್ನೆಯಷ್ಟೇ ಬಂಧಿಸಿದ್ದರು. ಇಂದು ಬೆಳಿಗ್ಗೆ ಪಂಚನಾಮೆ ನಡೆಸಲೆಂದು ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದಾಗ ಪಿ.ಎಸ್.ಐ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.