ಕಲಬುರಗಿ.ಜೂ 01: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಇದ್ದುದರಿಂದ ಕಾಂಗ್ರೆಸ್ ಸೇರಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ್ ಚವ್ಹಾಣ್ ಅವರಿಗೆ ಈಗ ವಾಟ್ಸಪ್ ಮೂಲಕ ನಿರಂತರವಾಗಿ ಜೀವ ಬೆದರಿಕೆ ಬರುತ್ತಿರುವ ಕುರಿತು ಸ್ವತ: ಅವರೇ ಸಿಇಎನ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕಳೆದ ಮೇ 29ರಂದು ರಾತ್ರಿ 9-05ಕ್ಕೆ ಅಪರಿಚಿತ ವಾಟ್ಸಪ್ ಮೊಬೈಲ್ ನಂಬರ್‍ನಿಂದ ಅರವಿಂದ್ ಚವ್ಹಾಣ್ ಅವರ ಮೊಬೈಲ್ ವಾಟ್ಸಪ್‍ಗೆ ಹಾಯ್ ಎಂದು ಕಳಿಸಿ ನಂತರ 9-06ಕ್ಕೆ ಆಪ್‍ಕೆ ಮಾರಣೇ ಕಾ ಆರ್ಡರ್ ಮಿಲಾ ಹೈ ಚವ್ಹಾಣ್ ಸರ್ ಎಂದು ಮೆಸೇಜ್ ಮಾಡಿದ್ದು, ನಂತರ ಅದನ್ನು ಅಳಿಸಿ ಹಾಕಿದ್ದಾರೆ. ಮರುದಿನ ಬೆಳಿಗ್ಗೆ 8-46ಕ್ಕೆ ಮತ್ತೆ ಅಪರಿಚಿತ ವಾಟ್ಸಪ್ ನಂಬರಿನಿಂದ ಹೈದ್ರಾಬಾದ್ ಸೆ ಆರ್ಡರ್ ಆಯಾ ಹೈ, ಮುಂಬಯಿ ಕೆ ಮಹಿಮಾ ಮೇ ಎಂಬ ಸಂದೇಶವನ್ನು ಚವ್ಹಾಣ್ ಅವರ ವಾಟ್ಸಪ್‍ಗೆ ರವಾನಿಸಿದ್ದಾರೆ. ಅದೇ ದಿನ ರಾತ್ರಿ 9-32 ನಿಮಿಷಕ್ಕೆ ಅವರ ವಾಟ್ಸಪ್‍ಕ್ಕೆ ಅಪರಿಚಿತ ವಾಟ್ಸಪ್ ಮೂಲಕ ಪಿಸ್ತೂಲ್‍ನಂತೆ ಕಾಣುವ ಚಿತ್ರವನ್ನು ಕಳಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಗೆಳೆಯರಾದ ಮೂಖೇಶ್ ರಾಠೋಡ್ ಮತ್ತು ದಿನೇಶ್ ಪವಾರ್ ಅವರಿಗೆ ತಿಳಿಸಿದ್ದು, ಕೂಡಲೇ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರು ಸಲ್ಲಿಸಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.