ಕಾಂಗ್ರೆಸ್ ಮಾರಾಟವಾಗದ ವಸ್ತು:ಬೊಮ್ಮಾಯಿ

ಕನಕಪುರ,ಮೇ.೮- ಅಂಗಡಿಯಲ್ಲಿ ವಸ್ತು ಮಾರಾಟವಾಗದಿದ್ದಾಗ ಗ್ಯಾರಂಟಿ, ವಾರಂಟಿ ಎಂದು ಸ್ಕೀಂ ಕೊಟ್ಟು ಮಾರಾಟ ಮಾಡುತ್ತಾರೆ. ಅದೇ ರೀತಿ ಕಾಂಗ್ರೆಸ್ ಮಾರಾಟವಾಗದ ವಸ್ತು, ಅದಕ್ಕಾಗಿ ಗ್ಯಾರಂಟಿ ಎನ್ನುತ್ತಾರೆ, ಮೇ ೧೦ ರ ತನಕ ಅದರ ಗ್ಯಾರಂಟಿ, ನಂತರ ಅದು ಗಳಗಂಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಕನಕಪುರದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರವಾಗಿ ಬೃಹತ್ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಎಲ್ಲಾ ರಾಜ್ಯಗಳಲ್ಲೂ ವಿಶ್ವಾಸ ಕಳೆದುಕೊಂಡು ತನ್ನ ಗ್ಯಾರಂಟಿಯನ್ನು ಕಳೆದುಕೊಂಡು ಖಾಲಿ ಮಾಡಿದೆ, ಕರ್ನಾಟಕದಲ್ಲಿ ಮೇ ೧೦ ರ ನಂತರ ಕಾಂಗ್ರೆಸ್ ಪಕ್ಷವು ಇಲ್ಲಿಂದಲೂ ತನ್ನ ಗ್ಯಾರಂಟಿಯನ್ನು ಕಳೆದುಕೊಂಡು ಖಾಲಿ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ನಾನು ಕೊಟ್ಟಿದ್ದು ಎಂದು ಹೇಳುತ್ತಾ ತಿರುಗುತ್ತಿದ್ದಾರೆ. ಅವರ ಸರ್ಕಾರವಿದ್ದಾಗ ಬಿಜೆಪಿ ಸರ್ಕಾರ ಕೊಡುತ್ತಿದ್ದ ೧೦ ಕೆಜಿ ಅಕ್ಕಿಗೆ ಬದಲಾಗಿ ೫ ಕೆಜಿ ಅಕ್ಕಿ ಕೊಟ್ಟರು. ಒಂದು ಕೆಜಿ ಅಕ್ಕಿಗೆ $ ೩೦, ಅದನ್ನು ತುಂಬುವ ಚೀಲಕ್ಕೆ $ ೩, ಮೋದಿ ಅವರು ಅಕ್ಕಿಗೆ $ ೩೦ ಕೊಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯ ಚೀಲಕ್ಕೆ ತಾನು $ ೩ ಕೊಟ್ಟು ಅನ್ನಭಾಗ್ಯ ತಮ್ಮದೆಂದು ಪೋಟೋ ಹಾಕಿಸಿಕೊಂಡು ದೊಡ್ಡದಾಗಿ ಹೇಳಿಕೊಂಡರು, ಆದರೆ $ ೩೦ ಕೊಟ್ಟ ಮೋದಿ ಅವರ ಹೆಸರು ಹೇಳಿಲ್ಲ. ಅವರು ಕೊಟ್ಟಿದ್ದು ಅನ್ನಭಾಗ್ಯವಲ್ಲ, ಗೋಣಿ ಚೀಲ ಭಾಗ್ಯ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರ ನಡೆಸಿ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು. ಆದರೂ ಜನರ ತಿರಸ್ಕಾರಕ್ಕೆ ಒಳಗಾಗಿದ್ದರೂ ಮತ್ತೆ ಅಧಿಕಾರಕ್ಕೆ ಬಂದು ಅಧಿಕಾರ ಕಳೆದುಕೊಂಡರು. ಭ್ರಷ್ಟಾಚಾರವನ್ನೇ ಹೊದ್ದುಕೊಂಡಿರುವ ಕಾಂಗ್ರೆಸ್ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಕಡೆ ಕೈ ತೋರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿಗರು ನಮ್ಮ ಕಡೆ ಭ್ರಷ್ಟಾಚಾರವೆಂದು ಕೈ ತೋರಿಸಿದರೆ, ಒಂದು ಬೆರಳು ನಮ್ಮ ಕಡೆ ಇರುತ್ತದೆ, ಇನ್ನು ಮೂರು ಬೆರಳು ಅವರ ಕಡೆ ಇರುತ್ತದೆ ಎಂಬುದನ್ನು ಅವರು ಮರೆತಿದ್ದಾರೆ, ಜನರು ಈ ಚುನಾವಣೆಯಲ್ಲಿ ನೆನಪು ಮಾಡುತ್ತಾರೆ ಎಂದು ತಿಳಿಸಿದರು..
ಈ ಬಾರಿ ಬಿಜೆಪಿ ಪಕ್ಷವು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ, ಕನಕಪುರ ಕ್ಷೇತ್ರದ ಜನತೆಯು ಆರ್.ಅಶೋಕ್ ಅವರಿಗೆ ಮತ ನೀಡಿ ಇಲ್ಲಿ ಕಮಲವನ್ನು ಅರಳಿಸುವ ಮೂಲಕ ಬಿಜೆಪಿಯನ್ನು ಇಲ್ಲಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಆರ್.ಅಶೋರ್ಕ್ ಮಾತನಾಡಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಮಾಡಿರುವ ಅಕ್ರಮ, ಭ್ರಷ್ಟಾಚಾರ ಒಂದ, ಎರಡ ಎಂದು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿ, ಕಾಂಗ್ರೆಸ್ಸಿಗರು ಸತ್ಯ ಹರಿಶ್ಚಂದ್ರರ ಹಾಗೆ ಮಾತನಾಡುತ್ತಾರೆ, ಇವರು ಎಷ್ಟು ಹರಿಶ್ಚಂದ್ರರು ಎಂದು ರಾಜ್ಯದ ಜನತೆಗೆ ತಿಳಿದಿದೆ ಎಂದು ಹೇಳಿದರು.