ಕಾಂಗ್ರೆಸ್ ಭ್ರಷ್ಟ ಸರ್ಕಾರ : ಜೋಶಿ ಟೀಕೆ

ಹುಬ್ಬಳ್ಳಿ, ಡಿ ೧೦: ಕಾಂಗ್ರೆಸ್ ಸರ್ಕಾರ ಸಿಸಿ ಸರ್ಕಾರ ಅಂದರೆ, ಕಾಂಪಿಟೇಶನ್ ಇನ್ ಕರಪ್ಷನ್ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಪರಸ್ಪರ ಕೆಸರೆರಚಾಟ ನೋಡಿದರೆ ಇದು ಕಂಪ್ಲೆಂಟ್ ಸರ್ಕಾರ ಎಂದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಆದರೆ ಇವರ ಪರಸ್ಪರ ಕೆಸರೆರಚಾಟ ನಿಲ್ಲುತ್ತಿಲ್ಲ. ಪರಸ್ಪರ ಕೆಸರೆರಚಾಟ, ಗುಂಪುಗಾರಿಕೆಯಿಂದ ಸರ್ಕಾರದ ಆಡಳಿತರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೊಪಿಸಿದರು. ಮೋದಿ ಸರ್ಕಾರ ನೀಡಿದ ಅಕ್ಕಿ ಬಿಟ್ಟು ಇವರು ಇನ್ನೂ ಅಕ್ಕಿ ಕೊಡಲು ಆಗಿಲ್ಲ. ಅನ್ನಭಾಗ್ಯ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಸ್ಸುಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ವಿದ್ಯುತ್ ಕೊರತೆಯಾಗುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದೆ ಎಂದರು.
ಬಿ.ಕೆ. ಹರಿಪ್ರಸಾದ ಅವರನ್ನು ಮೂಲೆಗುಂಪು ಮಾಡಲು ಈಡಿಗ ಸಮಾವೇಶವನ್ನು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಈ ಬಗ್ಗೆ ಅವರೇ ಉತ್ತರ ಕೊಡಬೇಕು. ಕಾಂಗ್ರೆಸ್‌ನಲ್ಲಿ ತಮ್ಮ ವಿರುದ್ಧ ಮಸಲತ್ತು ಮಾಡುವವರ ವಿರುದ್ಧ ಮಾತನಾಡುವ ತಾಕತ್ತು ಬಿ.ಕೆ. ಹರಿಪ್ರಸಾದ್ ಅವರಿಗಿಲ್ಲ. ಹೀಗಾಗಿ ಅವರು ಬಿಜೆಪಿಗೆ ಬೈಯ್ಯುತ್ತಿದ್ದಾರೆ. ಈ ಮಸಲತ್ತು ಮಾಡುತ್ತಿರುವುದು ಸಿದ್ಧರಾಮಯ್ಯ ಅವರೇ. ಆದರೆ ಅದರ ವಿರುದ್ಧ ಮಾತನಾಡುವ ಶಕ್ತಿ ಹರಿಪ್ರಸಾದ ಅವರಿಗೆ ಇಲ್ಲ ಎಂದು ಜೋಶಿ ನುಡಿದರು.