ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ : ಸಿಎಂ

ಬೆಂಗಳೂರು,ಜು.೨೭- ಜನೋತ್ಸವವನ್ನು ಭ್ರಷ್ಟೋತ್ಸವ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭ್ರಷ್ಟಾಚಾರದ ಗಂಗೋತ್ರಿಯಾಗಿರುವ ಕಾಂಗ್ರೆಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ.ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ತಮ್ಮ ಸರ್ಕಾರದ ವಿರುದ್ಧ ನಿರ್ದಿಷ್ಟವಾದ ಭ್ರಷ್ಟಾಚಾರ ಪ್ರಕರಣ ಇದ್ದರೆ ಹೇಳಲಿ ತನಿಖೆ ಮಾಡಿಸುತ್ತೇನೆ. ಸುಮ್ಮನೆ ಹಿಟ್ ಅಂಡ್ ರನ್ ಬೇಡ ಎಂದರು.
ಕಾಂಗ್ರೆಸ್‌ನ ಅಧ್ಯಕ್ಷರು, ಹಿಂದಿನ ಅಧ್ಯಕ್ಷರು ಭ್ರಷ್ಟಾಚಾರ ಆರೋಪದಡಿ ದಿನಾ ಇಡಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ವಿಚಾರಣೆ ಎದುರಿಸಿ ಬಂದಿದ್ದಾರೆ. ಇಂತಹವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಹಗರಣಗಳೂ ಜನರಿಗೆ ಗೊತ್ತಿವೆ. ಹಾಗಾಗಿಯೇ ಜನ ಅವರನ್ನು ಯಾವ ಸ್ಥಾನದಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಆದರೂ ಕಾಂಗ್ರೆಸ್‌ನವರು ಇನ್ನೂ ಪಾಠ ಕಲಿತಿಲ್ಲ. ಮುಂದೆ ಜನ ಕಾಂಗ್ರೆಸ್‌ಗೆ ಸರಿಯಾದ ಜಾಗ ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ. ಅದು ವ್ಯಕ್ತಿಯ ಪೂಜೆ, ನಾವು ಜನರ ಉತ್ಸವ ಮಾಡುತ್ತಿದ್ದೇವೆ, ಅವರು ವೈಯಕ್ತಿಕ ಉತ್ಸವ ಮಾಡುತ್ತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಏನೆಲ್ಲ ಭ್ರಷ್ಟಾಚಾರವಾಗಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬಂಧಿಸಲು ಕ್ರಮ
ದಕ್ಷಿಣ ಕನ್ನಡದ ಬಿಜೆಪಿ ಮುಖಂಡನ ಕೊಲೆ ಆರೋಪಿಯನ್ನು ಬಂಧಿಸಲು ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಕೇರಳ ಗಡಿ ಭಾಗವಾಗಿರುವುದರಿಂದ ಕೇರಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.ಅಮಾಯಕರ ಕೊಲೆಯಾದಾಗ ಆಕ್ರೋಶವಿರುತ್ತದೆ. ಎಲ್ಲರಿಗೂ ಶಾಂತಿ, ಸಹನೆಯಿಂದ ಇರಲು ಸೂಚಿಸಿದ್ದೇನೆ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆಯನ್ನು ಕೊಡಿಸಲಾಗುವುದು ಎಂದರು.
ಈ ಕೊಲೆ ವ್ಯವಸ್ಥಿತಿ ಸಂಚು, ಸಮಾಜದಲ್ಲಿ ಶೋಭೆ ಉಂಟು ಮಾಡುವ ಇಂತಹ ಹಂತಕರನ್ನು ಸದೆ ಬಡಿಯುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.