ದೇವದುರ್ಗ,ಏ.೦೪- ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಒಳಒಪ್ಪಂದ ಮಾಡಿಕೊಂಡು ತಾಲೂಕಿನ ಜನರನ್ನು ಯಾಮಾರಿಸುತ್ತಿದ್ದಾರೆ. ಕುಟುಂಬ ರಾಜಕಾರಣ ಮಿತಿಮೀರಿದ್ದು, ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿಕಲಿಸಲು ಹಾಗೂ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಕೈಬಲಪಡಿಸಲು ಜೆಡಿಎಸ್ ಸೇರಲು ತೀರ್ಮಾನಿಸಿದ್ದೇವೆ ಎಂದು ಆಪ್ ಪಕ್ಷ ತಾಲೂಕು ಅಧ್ಯಕ್ಷ ಹನುಮಂತ್ರಾಯ ಚಿಕ್ಕಗುಡ್ಡ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು. ನಾನು ಎರಡು ವರ್ಷಗಳಿಂದ ಆಮ್‌ಆದ್ಮಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಆಪ್ ಪಕ್ಷದ ತತ್ವ ಸಿದ್ಧಾಂತ ಉತ್ತಮವಾಗಿದ್ದರೂ ತಾಲೂಕಿನಲ್ಲಿ ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದು ಜೆಡಿಎಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ನಾವು ಕೂಡ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕಗೆ ಬೆಂಬಲ ನೀಡುತ್ತಿದ್ದೇವೆ. ಶೀಘ್ರದಲ್ಲಿ ಆಪ್ ಪಕ್ಷದ ತಾಲೂಕು ಅಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದು.
ತಾಲೂಕಿನಲ್ಲಿ ಭ್ರಷ್ಟಾಚಾರ, ಮದ್ಯ ಅಕ್ರಮ ಮಾರಾಟ, ಮರಳು ಅಕ್ರಮ ದಂಧೆ ಮಿತಿಮೀರಿದ್ದು, ಇದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತೊಡಗಿಕೊಂಡಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದ್ದು, ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ಈಗಾಗಿ ಎರಡೂ ಪಕ್ಷಗಳಿಗೆ ಬುದ್ದಿ ಕಲಿಸಲು ನಾನು ನನ್ನ ಬೆಂಬಲಿಗರೊಂದಿಗೆ ಶೀಘ್ರದಲ್ಲಿ ಜೆಡಿಎಸ್ ಸೇರುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ಪೂಜಾರಿ, ವೀರೇಶ ನಾಯಕ ಇದ್ದರು.