ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೨- ವಿಧಾಮಂಡಲದ ಅಧಿವೇಶನ ನಡೆಯುತ್ತಿರುವಾಗಲೇ ಬೆಂಗಳೂರಿನಲ್ಲಿಂದು ಆಡಳಿತರೂಢಾ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆಗಳನ್ನು ನಡೆಸಿದವು.ಒಂದೆಡೇ ಕಾಂಗ್ರೆಸ್ ಪಕ್ಷ, ರಾಹುಲ್‌ಗಾಂಧಿ ಅವರ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ವಿಪಕ್ಷವಾದ ಬಿಜೆಪಿ ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದೆ.ಸಂಸತ್ ಸ್ಥಾನದಿಂದ ರಾಹುಲ್‌ಗಾಂಧಿ ಅವರನ್ನು ಅನರ್ಹಗೊಳಿಸುವ ಅರ್ಜಿ ನ್ಯಾಯಾಲಯದಲ್ಲಿ ವಜಾ ಆಗಿರುವ ಬೆನ್ನಲ್ಲೆ ಕಾಂಗ್ರೆಸ್ ನಾಯಕರು ರಾಹುಲ್‌ಗಾಂಧಿ ಅವರ ವಿರುದ್ದ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ಸ್ವತಂತ್ರ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು.ರಾಹುಲ್‌ಗಾಂಧಿ ಅವರ ಸತ್ಯದ ನುಡಿಗಳನ್ನು ಸಹಿಸಿಕೊಳ್ಳದ ಪ್ರಧಾನಮಂತ್ರಿಗಳು ಅವರ ಮೇಲೆ ಎಲ್ಲ ಸೇಡಿನ ಕ್ರಮಗಳನ್ನು ಅನುಸರಿಸುತ್ತದೆ. ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಇಡೀ ರಾಷ್ಟ್ರವೇ ಖಂಡಿಸಿದೆ. ಬಿಜೆಪಿಯ ದ್ವೇಷ ರಾಜಕಾರಣವನ್ನು ಖಂಡಿಸಿ ಇಂದು ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗ ಸ್ವತಂತ್ರ ಉದ್ಯಾನವನದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಿತು.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರುಗಳಾದ ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು, ಮುಖಂಡರುಗಳು, ಈ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಬಿಜೆಪಿಯ ಸೇಡಿನ ರಾಜಕಾರಣವನ್ನು ಖಂಡಿಸಿದರು.
ಮೊಳಗಲಿ ಮೊಳಗಲಿ ಸತ್ಯದ ಘರ್ಜನೆ ಮೊಳಗಲಿ. ಕುತಂತ್ರದಿಂದ ಸತ್ಯವನ್ನು ಮುಚ್ಚಿಡಲಾಗದು. ಕುತಂತ್ರ ಬಿಜೆಪಿಗೆ ಧಿಕ್ಕಾರ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಭಿತ್ತಿಪತ್ರವನ್ನು ಪ್ರತಿಭಟನೆ ನಿರತ ಕಾಂಗ್ರೆಸ್ ಸದಸ್ಯರು ಪ್ರದರ್ಶಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸ್ವಾತಂತ್ರ್ಯ ಉದ್ಯಾನವನದಲ್ಲಿಂದು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಬಿಜೆಪಿ ಧರಣಿ
ಕಾಂಗ್ರೆಸ್ ಸ್ವತಂತ್ರ ಉದ್ಯಾನವನದಲ್ಲಿ ಧರಣಿಗೆ ಪ್ರತಿಯಾಗಿ, ಬಿಜೆಪಿ ನಾಯಕರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ, ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಸಚಿವರುಗಳಾದ ಆರ್. ಅಶೋಕ್, ಸುನೀಲ್‌ಕುಮಾರ್, ಅರಗ ಜ್ಞಾನೇಂದ್ರ, ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.
ರಾಜ್ಯಪಾಲರಿಗೆ ಮನವಿ
ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿರುವ ಬಿಜೆಪಿ ನಾಯಕರು ಅಲ್ಲಿಂದಲೇ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಸದನದಲ್ಲಿ ನಿನ್ನೆಯಿಂದಲೇ ಧರಣಿ
ವಿಪಕ್ಷವಾದ ಬಿಜೆಪಿ ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿನ್ನೆ ಧರಣಿ ನಡೆಸಿತ್ತು. ಬಿಜೆಪಿಯ ಧರಣಿ ಹಿನ್ನೆಲೆಯಲ್ಲಿ ಸದನವನ್ನು ಮಂದೂಡಲಾಗಿತ್ತು. ಆಡಳಿತಾರೂಢಾ ಕಾಂಗ್ರೆಸ್ ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ, ನಮ್ಮ ರಾಜ್ಯ ಪೊಲೀಸರೇ ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಿನ್ನೆ ವಿಧಾನಸಭೆಯಲ್ಲಿ ಜೈನಮುನಿಗಳ ಹತ್ಯೆ ಪ್ರಕರಣ ಸಿಬಿಐ ತನಿಖೆ ಬೇಕಾಗಿಲ್ಲ ಎಂದು ಹೇಳಿ, ಸಿಬಿಐ ತನಿಖೆ ನಡೆಸಬೇಕು ಎಂಬ ಬಿಜೆಪಿ ಹೇಳಿಕೆಯನ್ನು ತಳ್ಳಿ ಹಾಕಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದನದ ಒಳಗೂ ಹೊರಗೆ ಹೋರಾಟವನ್ನು ನಡೆಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ ಬಿಜೆಪಿ ಶಾಸಕರು ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಸುನೀಲ್ ಕುಮಾರ್, ಮತ್ತಿತರರು ಭಾಗವಹಿಸಿದ್ದರು.

ರಾಜ್ಯದಲ್ಲಿ ಜಂಗಲ್ ರಾಜ್ಯ
ರಾಜ್ಯದಲ್ಲಿ ಜಂಗಲ್ ರಾಜ್ಯ ಆರಂಭವಾಗಿದೆ. ಸಾಮಾನ್ಯರು ಭಯ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನಮುನಿ ಕೊಲೆಯಾಗಿದೆ, ಬಿಜೆಪಿ ಕಾರ್ಯಕರ್ತರ ಕೊಲೆಯೂ ಆಗಿದೆ. ಸಾಮಾನ್ಯರ ಕೊಲೆಯಾಗಿದೆ. ಇಬ್ಬರು ಟೆಕ್ಕಿಗಳ ಕೊಲೆಯಾಗಿದೆ. ಕೊಲೆಮಾಡಿ ಆ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಾಕುತ್ತಾರೆ. ಕೊಲೆಗಡುಕರಿಗೆ ಯಾವುದೇ ಭಯ ಇಲ್ಲ. ಪೊಲೀಸರ ಮೇಲೂ ಒತ್ತಡ ಹೇರಲಾಗುತ್ತಿದೇ ಎಂದು ದೂರಿದರು.
ಮರಳು ಅಕ್ರಮವನ್ನು ತಡೆಯಲು ಮುಂದಾಗಿದ್ದ ಪೊಲೀಸರನ್ನೇ ಕೊಲೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸರ್ಕಾರದ ಮುಂದೆ ತಲೆಬಾಗಿ ನಿಂತಿದ್ದಾರೆ. ಹೀಗಾಗಿ ಕೊಲೆಗಡುಕರಿಗೆ ಭಯವಿಲ್ಲದಂತಾಗಿದೆ. ದಪ್ಪ ಚರ್ಮದ ಸರ್ಕಾರ ನಮ್ಮ ಮಾತುಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಮಹಾನಿರ್ದೇಶಕರನ್ನು ಕರೆಸಿಕೊಂಡು ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ. ರಾಜ್ಯಪಾಲರು ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಮಾತನಾಡುವ ಭರವಸೆ ನೀಡಿದ್ದಾರೆ ಎಂದು ಬಸವರಾಜಬೊಮ್ಮಾಯಿ ಹೇಳಿದರು.