ಕಾಂಗ್ರೆಸ್ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ: ಪಿ.ರಾಜೀವ್

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಮಾ.೧: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯವು ಅರಾಜಕತೆಯತ್ತ ಸಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿ ದರು.ಪಟ್ಟಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್‌ರವರ ಬೆಂಬಲಿಗರು ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಬಾದ್ ಎಂದು ಕೂಗಿದರು ಈ ಬಗ್ಗೆ ಕಾಂಗ್ರೆಸ್ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು, ಆದರೆ ಎಫ್‌ಎಸ್‌ಎಲ್ ವರದಿ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವುದು ಎಷ್ಟು ಸರಿ ಮತ್ತು ಎಫ್‌ಎಸ್‌ಎಲ್ ವರದಿ ಯಾರ ಕಂಟ್ರೋಲ್‌ನಲ್ಲಿದೆ, ವರದಿ ತರಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ 30ನಿಮಿಷ ಸಾಕು, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್‌ನವರು ಚುನಾವಣೆಗೂ ಮುನ್ನ ಬ್ಯಾನ್ ಆಗಿರುವ ಪಿಎಫ್‌ಐ ಸಂಘಟನೆ ಹಾಗೂ ರದ್ದುಗೊಳಿಸಿರುವ ಕಲಂ 370ನ್ನು ಪುನಃ ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ, ಅಂಬೇಡ್ಕರ ಸಂವಿಧಾನ ಇಡೀ ದೇಶಕ್ಕೆ ಅನ್ವಯವಾಗಲು ಅವರಿಗೆ ಇಷ್ಟವಿಲ್ಲ, ಸಂವಿಧಾನ ಓದು ಅಭಿಯಾನ ಮಾಡುತ್ತಿದ್ದಾರೆ, ಅವರಿಗೆ ಹೇಳುತ್ತೇನೆ 39ನೇ ತಿದ್ದುಪಡಿಯನ್ನು ತಂದಿರುವ ಬಗ್ಗೆ ಸಂವಿಧಾನವನ್ನು ಮೊದಲು ನೀವು ಓದಬೇಕು, ತುರ್ತು ಪರಿಸ್ಥಿತಿ ತಂದಾಗ ಏನೇನು ಅನಾಹುತಗಳಾಗಿವೆ ಎನ್ನುವ ಬಗ್ಗೆ ನೀವು ಓದಬೇಕು, ಸಂವಿಧಾನಕ್ಕೆ ದೊಡ್ಡ ಅಪಚಾರ ಮಾಡುತ್ತಿರುವುದು ನೀವು, ಈಗ ನಮಗೆ ಬುದ್ದಿ ಹೇಳೋಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ವಿಜಯನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.