
ನವಲಗುಂದ,ಮಾ4 : ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರಗಳು ಸಾರ್ವಜನಿಕರಿಗೆ ಅವಶ್ಯವಾಗಿರುವಂತಹ ಅಡುಗೆ ಅನೀಲ ದರವನ್ನು ಮತ್ತೆ ಏರಿಕೆ ಮಾಡಿ ಆರ್ಥಿಕವಾಗಿ ಹೊರೆ ಮಾಡುತ್ತಿವೆ. ದಿನಬಳಕೆ ಸಾಮಗ್ರಿಗಳ ಬೆಲೆ ಏರಿಕೆ ಅವುಗಳ ಮೇಲೆ ಜೆ.ಎಸ್.ಟಿ ಹೊರೆಯಿಂದ ಜನರು ಬೇಸತ್ತಿದ್ದಾರೆಂದು ಮಾಜಿ ಸಚಿವ ಕೆ.ಎನ್.ಗಡ್ಡಿ ಹೇಳಿದರು.
ಪಟ್ಟಣದ ಲಿಂಗರಾಜ ಸರ್ಕಲ್‍ನಲ್ಲಿ ನವಲಗುಂದ ಬ್ಲಾಕ ಕಾಂಗ್ರೆಸ್ ಸಮಿತಿಯಿಂದ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು.
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋಧ ಅಸೂಟಿ, ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ಮಾತನಾಡಿ ಬಿಜೆಪಿ ಸರಕಾರ ಜನಸಾಮಾನ್ಯರ ಮೇಲೆ ಜೆ.ಎಸ್.ಟಿ ಹಾಗೂ ಅಡುಗೆ ಅನಿಲ, ಪೆಟ್ರೋಲ್ ಸೇರಿದಂತೆ ರೈತರ ಅವಶ್ಯಕ ಸಾಮಗ್ರಿಗಳನ್ನು ಏರಿಕೆ ಮಾಡುತ್ತಲೆ ಬರುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರ ದಿನಂಪ್ರತಿ ಯಾವುದಾದರೊಂದು ಸಾಮಗ್ರಿಗಳ ಬೆಲೆಯನ್ನು ಏರಿಕೆ ಮಾಡುತ್ತಾ ಬಡವರು, ರೈತರ ಜೀವನ ಮಾಡುವುದನ್ನು ದುಸ್ತರವಾಗಿಸಿದ್ದಾರೆ. ಇಂತಹ ನಾಚಿಕೇಡು ಸರಕಾರಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.
ಲಿಂಗರಾಜ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಖಾಲಿ ಅಡುಗೆ ಗ್ಯಾಸ್ ಸಿಲಿಂಡರ್‍ಗಳನ್ನು ಪ್ರತಿಭಟನೆಯಲ್ಲಿ ಪ್ರದರ್ಶಿಸುವುದರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಕಾಂಗ್ರೆಸ್ ಮುಖಂಡರಾದ ಬಾಪುಗೌಡ ಪಾಟೀಲ, ಚಂಬಣ್ಣ ಹಾಳದೋಟರ್, ಸದುಗೌಡ ಪಾಟೀಲ, ಮಂಜುನಾಥ ಜಾಧವ, ಕುಮಾರ ಕಲಾಲ, ಸಿರಾಜಾ ಧಾರವಾಡ, ಬಸವರಾಜ ನರಗುಂದ ನೂರಾರು ಕಾರ್ಯಕರ್ತರು ಇದ್ದರು.