ಕಾಂಗ್ರೆಸ್ ಪಕ್ಷ ದೂರ ಸರಿಸಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ

ಕೆ.ಆರ್.ಪೇಟೆ:ಏ:23: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಮಹಾದೇವಿನಂಜುಂಡ ಹಾಗೂ ಉಪಾದ್ಯಕ್ಷರಾಗಿ ಗಾಯಿತ್ರಮ್ಮ ಅಧಿಕಾರ ಸ್ವೀಕರಿಸಿದರು.
ಎರಡು ವರ್ಷಗಳ ನಂತರ ಪಟ್ಟಣದ ಪುರಸಭೆಗೆ ಅಧ್ಯಕ್ಷ ಉಪಾದ್ಯಕ್ಷರ ಅಧಿಕಾರ ಬಂದಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷವನ್ನು ದೂರ ಸರಿಸಿ ಅಧಿಕಾರ ಹಿಡಿದಿವೆ.
ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲುಗೊಳಿಸಿ ಹಾಗೂ ಉಪಾದ್ಯಕ್ಷ ಸ್ಥಾನವನ್ನು 2 ಎ ಮಹಿಳೆಗೆ ಮೀಸಲುಗೊಳಿ ಸಿದ್ದುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ಬುಧವಾರ ಈ ಹಿಂದಿನ ಮೀಸಲಾತಿಯನ್ನೇ ಎತ್ತಿಹಿಡಿದ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಅಧ್ಯಕ್ಷ ಉಪಾದ್ಯಕ್ಷ ಹುದ್ದೆಗೆ ಏರಲು ಇದ್ದ ಅಡೆತಡೆಗಳು ನಿವಾರಣೆಯಾದಂತಾಗಿದ್ದು ಇಂದು ಮಹಾದೇವಿ ನಂಜುಂಡ ಅಧ್ಯಕ್ಷೆಯಾಗಿ ಹಾಗೂ ಗಾಯಿತ್ರಮ್ಮ ಉಪಾದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ನಡುವೆ ಸಭೆ ಪ್ರಾರಂಭವಾದ ಮೊದಲೇ ಕಾಂಗ್ರೆಸ್ ಸದಸ್ಯರುಗಳು ನಮಗೆ ಕೋರ್ಟಿನ ಆದೇಶದ ಪ್ರತಿಯೇ ಸಿಕ್ಕಿಲ್ಲ ಹೇಗೆ ಸಭೆ ಕರೆದು ಅಧಿಕಾರ ವಹಿಸುತ್ತೀರಿ ಹಾಗೂ ಇಲ್ಲಿಯವರೆಗೆ ಆಡಳಿತಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಬೇಕು ಎಂದು ಜೋರು ದನಿಯಲ್ಲಿ ಮಾತನಾಡಿ ಸಭೆಯನ್ನು ಮುಂದೂಡುವಂತೆ ತಹಶೀಲ್ದಾರ್ ಶಿವಮೂರ್ತಿಯವರಿಗೆ ಮನವಿ ಮಾಡಿದರು. ಆದರೆ ತಹಶೀಲ್ದಾರ್ ಇವರುಗಳ ಮನವಿಯನ್ನು ಪರಿಗಣಿಸದೇ ನ್ಯಾಯಾಲಯದ ಆದೇಶದ ಅನ್ವಯ ಅಧ್ಯಕ್ಷ ಉಪಾದ್ಯಕ್ಷರ ಸಾಂವಿಧಾನಿಕ ಅಧಿಕಾರ ವಹಿಸಿಕೊಟ್ಟರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಮಹಾದೇವಿ ನಂಜುಂಡ ಮಾತನಾಡಿ ಸಚಿವ ನಾರಾಯಣಗೌಡರ ಮಾರ್ಗದರ್ಶನದÀಂತೆ ಮುಂದಿನ ದಿನಗಳಲ್ಲಿ ಪಟ್ಟಣದ ಸರ್ವಾಂಗಿಣ ಅಭಿವೃದ್ದಿಗೆ ಎಲ್ಲಾ ಸದಸ್ಯರುಗಳ ಜೊತೆಗೂಡಿ ಕೆಲಸ ನಿರ್ವಹಿಸಲಾಗುವುದು. ಪುರಸಭೆಗೆ ಸಾಕಷ್ಟು ಅನುದಾನಗಳನ್ನು ತಂದು ನಗರವನ್ನು ಅಭಿವೃದ್ದಿಪಡಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್ ಸೇರಿದಂತೆ ಪುರಸಭಾ ಸದಸ್ಯರುಗಳು ಹಾಜರಿದ್ದರು.