ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣ ನಿಶ್ಯಕ್ತವಾಗಿದೆಃ ಛಲವಾದಿ ನಾರಾಯಣಸ್ವಾಮಿ

ವಿಜಯಪುರ, ಜು.27-ಜನಹಿತವನ್ನು ಬಯಸದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣ ನಿಶ್ಯಕ್ತವಾಗಿದೆ ಒಂದು ರೀತಿ ವೆಂಟಿಲೇಟರ್‍ನಲ್ಲಿದೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸ ಸೇರುವುದು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿಜಯಪುರದ ಅನಂತಲಕ್ಷ್ಮೀ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತ, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡಿದೆ, ಸಂವಿಧಾನ ಬದಲಾವಣೆ ಮಾಡುವ ವಿಚಾರವನ್ನು ಬಿತ್ತಿ ಕಾಂಗ್ರೆಸ್ಸಿಗರು ದಲಿತ, ಅಲ್ಪಸಂಖ್ಯಾತರನ್ನು ಬಿಜೆಪಿಯಿಂದ ದೂರ ಇರಿಸಿದ್ದರು. ಈಗ ದಲಿತ ಬಾಂಧವರು ಎಚ್ಚೆತ್ತುಕೊಂಡು ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ, ಕಾಂಗ್ರೆಸ್ ಬೆನ್ನುಲುಬಾಗಿದ್ದ ದಲಿತ ಬಾಂಧವರು ಈಗ ಬಿಜೆಪಿ ಕೈ ಜೋಡಿಸುತ್ತಿದ್ದಾರೆ ಆ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಇತಿಹಾಸಪುಟ ಸೇರಲಿದೆ, ಪುಸ್ತಕಗಳಲ್ಲಿಯೇ ಕಾಂಗ್ರೆಸ್ ಪಕ್ಷ ಇತ್ತು ಎಂಬ ಸಂಗತಿಯನ್ನು ಓದುವ ದಿನ ದೂರವಿಲ್ಲ ಎಂದರು.
ಪಕ್ಷದ ತತ್ವ-ಸಿದ್ಧಾಂತಗಳ ಅಡಿಯಲ್ಲಿ, ನೀತಿ-ನಿಯಮಗಳ ಅಡಿಯಲ್ಲಿ ತೊಡಗಿಸಿಕೊಂಡವರಿಗೆ ಹಾಗೂ ಪಕ್ಷದ ಸಂಘಟನೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡವರಿಗೆ ಬಿಜೆಪಿ ಸದಾ ಉನ್ನತ ಸ್ಥಾನ ನೀಡುವ ಮೂಲಕ ಗೌರವಿಸುತ್ತದೆ ಎನ್ನುವುದನ್ನೇ ನಾನೇ ದೊಡ್ಡ ನಿದರ್ಶನ ಎಂದರು.
ಕಾಂಗ್ರೆಸ್ ವಿನಾಕಾರಣ ಬಿಜೆಪಿಯುನ್ನು ದಲಿತ ವಿರೋಧಿ ಎಂದು ಬಿಂಬಿಸುತ್ತಾ ಬಂದಿತು, ಆದರೆ ಸತ್ಯ ಈಗ ಬೆಳಕಿಗೆ ಬಂದಿದೆ, ಡಾ.ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಹಾಗೂ ಅವರ ಆಶಯಗಳ ಬಗ್ಗೆ ನೈಜವಾದ ಕಾಳಜಿಯನ್ನು ಹೊಂದಿದ್ದು ಬಿಜೆಪಿ ಮಾತ್ರ ಎಂದರು.
ಈ ಸತ್ಯ ಬೆಳಕಿಗೆ ಬಂದಾಗ ಕಾಂಗ್ರೆಸ್‍ನವರು ಹೊಸ ನಾಟಕ ಶುರು ಮಾಡಿದ್ದಾರೆ, ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಉಪಮೇಯರ್, ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ನೀಡುವ ಏಕೈಕ ಪಕ್ಷ ಬಿಜೆಪಿ, ಛಲವಾದಿ ನಾರಾಯಣಸ್ವಾಮಿ ಅವರಿಗೆ ಸನ್ಮಾನ ಮಾಡಲು ಬೆಂಗಳೂರಿಗೆ ಹೋದಾಗ, ನಾನೇ ಸ್ವತ: ವಿಜಯಪುರಕ್ಕೆ ಬರುವೆ ಎಂದು ಅಕ್ಕರೆಯಿಂದ ಒಪ್ಪಿಕೊಂಡರು ಎಂದರು. ಬಿಜೆಪಿಯ ಬಗ್ಗೆ ದಲಿತರು ಒಲವು ಬೆಳೆಸಿಕೊಳ್ಳುತ್ತಿದ್ದು, ದಲಿತ ಯುವಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಶಾಸಕ ರಮೇಶ ಭೂಸನೂರ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಮನು ಸಿದ್ಧಾರ್ಥ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಉಮೇಶ ಕಾರಜೋಳ, ಚಿದಾನಂದ ಚಲವಾದಿ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಮಳಗುಗೌಡ ಪಾಟೀಲ, ಗೀತಾ ಕುಗನೂರ, ವಿಠ್ಠಲ ನಡುವಿನಕೇರಿ, ಶ್ರೀನಿವಾಸ ಕಂದಗಲ್, ಶಿವಪುತ್ರ ನಾಟೀಕಾರ ಮೊದಲಾದವರು ಉಪಸ್ಥಿತರಿದ್ದರು.