ಕಾಂಗ್ರೆಸ್ ಪಕ್ಷಪಾತಿ ವೀರಶೈವ ಮಹಾಸಭೆ ಹಳಿಮನಿ ಆರೋಪ

ಕಲಬುರಗಿ: ಮಾ.27: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕವು ಕಾಂಗ್ರೆಸ್ ಪಕ್ಷದ ಸ್ವಂತ ಆಸ್ತಿಯಾಗಿದೆ ಎಂದು ಬಿಜೆಪಿ ಉತ್ತರ ಮತಕ್ಷೇತ್ರದ ಉಪಾಧ್ಯಕ್ಷ ಶಿವಲಿಂಗ್ ಹಳಿಮನಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ವೀರಶೈವ ಮಹಾಸಭೆಯು ಕಾಂಗ್ರೆಸ್ ಪಕ್ಷದ ಸ್ವಯಂ ಘೋಷಿತ ಆಸ್ತಿಯಾಗಿ ಮಾರ್ಪಟ್ಟಿದೆ. ಮಹಾಸಭೆಯು ಕೆಲವೊಂದು ಕಾಂಗ್ರೆಸ್ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಕಾಂಗ್ರೆಸ್ ವೀರಶೈವ ಮಹಾಸಭೆಯಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನ ಇಲ್ಲ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿನ ಇತ್ತೀಚಿನ ಮಹಾಸಭೆಯ ಕಾರ್ಯ ಚಟುವಟಿಕೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷದಿಂದ ಯಾರಾದರೂ ಆಯ್ಕೆಯಾದಲ್ಲಿ ಅವರಿಗೆ ಅದ್ದೂರಿಯಾಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸುತ್ತಾರೆ. ಅದೇ ಬೇರೆ, ಬೇರೆ ಪಕ್ಷದಿಂದ ಸಮಾಜದ ವ್ಯಕ್ತಿಗಳು ಬಹುದೊಡ್ಡ ನಿಗಮ, ಮಂಡಳಿಗಳಿಗೆ ನೇಮಕವಾದರೂ ಸಹ ಅವರನ್ನು ಸನ್ಮಾನಿಸುವುದಿಲ್ಲ ಎಂದು ಅವರು ದೂರಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ದತ್ತಾತ್ರೇಯ್ ಪಾಟೀಲ್ ರೇವೂರ್, ಯುವ ಮುಖಂಡ ಚಂದು ಪಾಟೀಲ್ ನಿಗಮವೊಂದರ ಅಧ್ಯಕ್ಷರಾದರೂ ಸಹ ಅವರಿಗೆ ವೀರಶೈವ ಮಹಾಸಭೆಯು ಸನ್ಮಾನಿಸಿಲ್ಲ. ಇದನ್ನೆಲ್ಲ ನೋಡಿದರೆ ಇದು ಕಾಂಗ್ರೆಸ್ ವೀರಶೈವ ಮಹಾಸಭೆಯಾಗಿದೆ. ಕೂಡಲೇ ಮಹಾಸಭೆಯವರು ತಮ್ಮ ಪಕ್ಷಾಪಾತಿ ಧೋರಣೆಯನ್ನು ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಉಳಿದ ಪಕ್ಷಗಳ ಸಮಾಜದ ಮುಖಂಡರು ವೀರಶೈವ ಮಹಾಸಭೆಯನ್ನು ಬಹಿಷ್ಕರಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.