ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ: ಎಂ.ಶಿವಣ್ಣ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 07- ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಿದ್ದು, ಪಕ್ಷದ ವರಿಷ್ಠರ ತೀರ್ಮಾನದ ವಿರುದ್ದವಾಗಿ ಅಂದು ಸೋನಿಯಾಗಾಂಧಿ ಅವರ ಪರ ಸಂಸತ್‍ನಲ್ಲಿ ಮತ ಹಾಕಿದ್ದೇನೆ. ಹೀಗಾಗಿ ಈ ಬಾರಿ ವರಿಷ್ಠರು ನನಗೆ ಚಾ.ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಸದಸ್ಯನ್ನಾಗಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟ ಕೆಲಸ ಮಾಡಿದ್ದೇನೆ. ನಂತರ ನನಗೆ ಮೂರು ಅವಧಿಯಲ್ಲಿ ಧ್ರುವನಾರಾಯಣ್ ಹಾಲಿ ಸಂಸದರು ಎಂಬ ಕಾರಣಕ್ಕೆ ಟಿಕೆಟ್ ದೊರೆಯಲಿಲ್ಲ. ಎರಡು ಬಾರಿ ದಿ. ಧ್ರುವನಾರಾಯಣ್ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಸೋತಿದ್ದರು ಸಹ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು. ಈಗ ಅವರು ನಿಧನರಾಗಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ನನ್ನನ್ನು ವರಿಷ್ಟ ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕ್ಷೇತ್ರದ ಶಾಸಕರು ಹಾಗೂ ಮಾಜಿ ಶಾಸಕರನ್ನು ಖುದ್ದು ಭೇಟಿ ಮಾಡಿ, ಮನವಿ ಮಾಡಿಕೊಂಡಿದ್ದೇನೆ. ಅವರು ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯನ್ನಾಗಿ ಲೋಕಸಭಾ, ವಿಧಾನಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿ, ಅವರ ಗೆಲುವಿಗೆ ಶ್ರಮ ವಹಿಸಿದ್ದೇನೆ. ಅಲ್ಲದೇ 8 ಕ್ಷೇತ್ರಗಳಲ್ಲಿ ತನ್ನದೇ ಆದ ವರ್ಚಸ್ಸು ಉಳಿಸಿಕೊಂಡು ಸಂಘಟನೆ ಮತ್ತು ಸಾರ್ವಜನಿಕರ ಜೀವನದಲ್ಲಿ ಬೆರೆತು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಹೀಗಾಗಿ ಈ ಬಾರಿ ಖಂಡಿತ ನನಗೆ ಟಿಕೆಟ್ ದೊರೆಯುತ್ತದೆ ಎಂಬ ಅಚಲ ವಿಶ್ವಾಸವನ್ನು ಎಂ. ಶಿವಣ್ಣ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಶಿವಣ್ಣ ಅವರ ಪುತ್ರ ಅಪೂರ್ವ ಶಿವಣ್ಣ, ತಾ.ಪಂ. ಮಾಜಿ ಸದಸ್ಯರಾದ ಆಲೂರು ಕೃಷ್ಣ, ಜಿಲ್ಲಾ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಗೂಳಿಪುರ ನಾಗೇಂದ್ರ, ಮುಖಂಡರಾದ ಆಶೋಕ್, ಕಾಗಲವಾಡಿ ಶಿವಸ್ವಾಮಿ ಇದ್ದರು.