ಕಾಂಗ್ರೆಸ್ ಪಕ್ಷದ ನಕಲು ಗ್ಯಾರಂಟಿ ಕಾರ್ಡ್ ವಿತರಣೆ : ಹೂಲಗೇರಿ ಆರೋಪ

ಮುದಗಲ್,ಮಾ.೧೩- ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರುಗಳನ್ನೊಳಗೊಂಡ ಮತ್ತು ಪಕ್ಷ ಅಧೀಕೃತವಾಗಿ ನೀಡಿದ ಗ್ಯಾರಂಟಿ ಕಾರ್ಡ್‌ಗಳನ್ನು ನಕಲು ಮಾಡಿ ವಿತರಣೆ ಮಾಡುತ್ತಾ, ಲಿಂಗಸುಗೂರು ತಾಲೂಕು ಜನತೆಗೆ ಮಂಕುಬೂದಿ ಎರಚುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಡಿ.ಎಸ್. ಹೂಲಗೇರಿ ಆರೋಪಿಸಿದರು.
ಮುದಗಲ್‌ನ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಅಧೀಕೃತ ಚಿಹ್ನೆ, ರಾಜ್ಯ, ಕೇಂದ್ರ ನಾಯಕರ ಭಾವಚಿತ್ರಗಳನ್ನೊಳಗೊಂಡ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುವಂತೆ ನನಗೆ ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದು, ಈ ನಿಟ್ಟಿನಲ್ಲಿ ಈಗಗಲೇ ಕ್ಷೇತ್ರಾದ್ಯಂತ ೪೦ ಸಾವಿರ ಕಾರ್ಡ್ ಹಂಚಲು ಗುರಿ ಹೊಂದಲಾಗಿದೆ.
ಆದರೆ ಪಕ್ಷದ ನಕಲು ಗ್ಯಾರಂಟಿ ಕಾರ್ಡ್‌ಗಳಲ್ಲಿ ತಮ್ಮ ಭಾವಚಿತ್ರವನ್ನು ಸೇವಾಕಾಂಕ್ಷಿ ಎಂದು ಛಾಪಿಸಿಕೊಂಡು ಕ್ಷೇತ್ರದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದರು. ನಕಲು ಗ್ಯಾರಂಟಿ ಕಾರ್ಡ್‌ಗಳನ್ನು ಕ್ಷೇತ್ರದಲ್ಲಿ ಹಂಚಿಕೆ ಮಾಡುತ್ತಿರುವುದನ್ನು ವರಿಷ್ಠರ ಗಮನಕ್ಕೆ ತಂದಿದ್ದು, ಪಕ್ಷದ ಅಧ್ಯಕ್ಷರುಗಳು ಇದರ ಬಗ್ಗೆ ವರಿಷ್ಠರಿಗೆ ದೂರು ಕೂಡ ಸಲ್ಲಿಸಲು ಮುಂದಾಗಿದ್ದಾರೆ ಎಂದರು.
ಪಕ್ಷದ ವರಿಷ್ಠರು ಈಗಾಗಲೇ ಕ್ಷೇತ್ರದಲ್ಲಿ ನಾನು ಸಾಧನೆ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಮುಂದಿನ ವಿಧಾನಸಭೆ ಚುನಾವಣೆಲಿ ನನಗೆ ಟಿಕೆಟ್ ಲಭಿಸಲಿ ಎಂದು ದೃಢವಿಶ್ವಾಸ ವ್ಯಕ್ತಪಡಿಸಿದರು.