ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಪಾಟೀಲ್

ಅಫಜಲಪುರ:ಎ.7: ಈ ಬಾರಿ ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದೆ. ಆದರೆ ಕೆಲವು ಕಾರಣಾಂತರಗಳಿಂದ ಇದೊಂದು ಬಾರಿ ನೀವೇ ಸ್ಪರ್ಧಿಸಿ ಎಂದು ಪಕ್ಷದ ವರಿಷ್ಠರು ಕೇಳಿಕೊಂಡಾಗ ಸಮ್ಮತಿ ಸೂಚಿಸಿದೆ. ಹೀಗಾಗಿ ಇಂದು ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿದೆ. ಆದ್ದರಿಂದ ಇದೊಂದು ಬಾರಿ ನನಗೆ ಆಶೀರ್ವದಿಸಿ ಎಂದು ಶಾಸಕ ಎಂ.ವೈ.ಪಾಟೀಲ್ ಮನವಿ ಮಾಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗಳು ನನಗೇನು ಹೊಸದಲ್ಲ. ಸೋಲು ಗೆಲುವನ್ನು ಸಮನಾಗಿ ನೋಡಿದ್ದೇನೆ. ರಾಜಕೀಯದಲ್ಲಿ ಬಂದು ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಸುಮಾರು 7 ಜನ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಸಹ ಪಕ್ಷದ ಸೂಚನೆ ಮೇರೆಗೆ ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದೇನೆ. ಎಲ್ಲಾ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ. ಎಲ್ಲರೂ ಒಗ್ಗೂಡಿ ಚುನಾವಣೆ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಈ ದೇಶ ಅಭಿವೃದ್ಧಿ ಹೊಂದಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ.
ರಾಜ್ಯದಲ್ಲಿ ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಅಫಜಲಪುರಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸುವ ಭರವಸೆ ಇದೆ.
ಈ ಹಿಂದೆ ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ನನ್ನ 5 ವರ್ಷದ ಅಭಿವೃದ್ಧಿಯ ಕಾರ್ಡ್ ತೆಗೆದುಕೊಂಡು ಮತದಾರರ ಬಳಿ ಹೋಗಿ ಮತ ಕೇಳುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಸಿದ್ದಯ್ಯ ಸ್ವಾಮಿ ಹಿರೇಮಠ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ, ಜಿಪಂ ಮಾಜಿ ಸದಸ್ಯರಾದ ಮತೀನ ಪಟೇಲ್, ಸಿದ್ದಾರ್ಥ ಬಸರಿಗಿಡ, ಚಂದ್ರಶೇಖರ್ ಕರಜಗಿ, ತಾಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಅನೇಕರು ಉಪಸ್ಥಿತರಿದ್ದರು.