ಕಾಂಗ್ರೆಸ್ ಪಕ್ಷದಿಂದ ತಾಲಿಬಾನ್ ಶಿಕ್ಷಣ, ತುಘಲಕ್ ಸರ್ಕಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.23: ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಶಿಕ್ಷಣ ನೀತಿಯನ್ನು ಜಾರಿ ಮಾಡಿ ತುಘಲಕ್ ಸರ್ಕಾರ ನಡೆಸಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ ಎಂದು ಬಿಜೆಪಿಯ ದಾವಣಗೆರೆ ಜಿಲ್ಲಾ ಘಟಕದ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್ ಕಳವಳ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 5, 8, 9 ಮತ್ತು 11ನೇ ತರಗತಿಗಳಿಗೆ ರಾಜ್ಯಮಟ್ಟದಲ್ಲಿ ಬೋರ್ಡ್, ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಮತ್ತು ಶಿಕ್ಷಣ ವಿರೋಧಿ ನಡೆಗೆ ತಡೆ ನೀಡಿ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಮುಂದಾಲೋಚನೆ ಇಲ್ಲದ ಮೊಂಡುತನದ ನಡೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ ಎಂದು ಹೇಳಿದರು.ಬೋರ್ಡ್, ಪಬ್ಲಿಕ್ ಪರೀಕ್ಷೆ ನಡೆಸಿಯೇ ತೀರುತ್ತೇನೆ ಎಂಬ ಕಾಂಗ್ರೆಸ್ ಸರ್ಕಾರದ ಮೊಂಡುತನದಿಂದ ವಿದ್ಯಾರ್ಥಿಗಳ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸರ್ಕಾರಕ್ಕೆ ಮಕ್ಕಳ ಹಿತಕ್ಕಿಂತ ತನ್ನ ಹಠವೇ ಮುಖ್ಯವಾಗಿದೆ. ಮಕ್ಕಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಖಂಡಿಸಿದರು.ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ, ನಿರಂತರ ಕಲಿಸುವ ವೃತ್ತಿ ನೈಪುಣ್ಯ ಶಿಕ್ಷಕರನ್ನು ಒದಗಿಸಿ,  ಕಲಿಯುವ ಮಕ್ಕಳ ಕಲಿಕೆಯ ಮಟ್ಟವನ್ನು ನಿರಂತರ ಮೌಲ್ಯಮಾಪನ ಮಾಡುವ ಮೂಲಕ ಮಕ್ಕಳು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಕಲಿಯಲು ನಿರಂತರವಾಗಿ ಕೈಹಿಡಿದು ನಡೆಸಬಹುದಾದ ಮಕ್ಕಳಸ್ನೇಹಿ ಶಿಕ್ಷಣ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಮಕ್ಕಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಸಕಾರಾತ್ಮಕ ಆಲೋಚನೆಗಳನ್ನು ತುಂಬಿ ಶಿಕ್ಷಣ ಕಲಿಯಲು ಪ್ರೋತ್ಸಾಹಿಸಬೇಕಾದ ಸರ್ಕಾರವೇ ಅವರಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಬರುವಂತೆ ಮಾಡಿದೆ. ಇದರಿಂದ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ತೀವ್ರ ಗೊಂದಲ ಉಂಟಾಗಿದೆ. ಸರ್ಕಾರದ ನಡೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಕಿಡಿಕಾರಿದರು.ಮಜಾವಾದಿ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ಶಾಲಾ ಮಕ್ಕಳ ಭವಿಷ್ಯಕ್ಕೆ ಕುತ್ತಾಗಿದೆ. ಇದು ಸರ್ಕಾರದ ಅವಿವೇಕತನದ ಪರಮಾವಧಿಯಾಗಿದೆ. ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದರೂ ಅವಿವೇಕಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಈಗಾಗಲೇ ಎರಡು ಮೂರು ವಿಷಯಗಳ ಪರೀಕ್ಷೆ ಬರೆದ ಮಕ್ಕಳು ಉಳಿದ ಪರೀಕ್ಷೆಗಳು ರದ್ದಾಗಿರುವುದು ಪರೀಕ್ಷೆ ಬರೆಯಬೇಕೋ ಬೇಡವೋ ಎಂಬ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಪೋಷಕರು ಚಿಂತೆಗೀಡಾಗಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ತ್ಯಾವಣಿಗೆ ವೀರಭದ್ರಪ್ಪ, ಪೋತಾಲ ಶ್ರೀನಿವಾಸ್, ಆರ್.ಶಿವಾನಂದ, ಜಿ.ವಿ.ಗಂಗಾಧರ, ಅನಿಲ್ ಕುಮಾರ್ ನಾಯ್ಕ, ಶ್ಯಾಗಲೆ ಮಲ್ಲೇಶ್, ದಂಡಪಾಣಿ ಇತರರು ಇದ್ದರು.