ಕಾಂಗ್ರೆಸ್ ಪಕ್ಷಕ್ಕೆ ಹೊಸ ಆಕ್ಸಿಜನ್ ನೀಡಿದ ಬಸನಗೌಡ ತುರ್ವಿಹಾಳ ಗೆಲುವು

ಮಸ್ಕಿ,ಮೇ.೩-ಇತ್ತೀಚಿಗೆ ನಡೆದಿದ್ದ ಉಪ ಚುನಾವಣೆಗಳಲ್ಲಿ ಸೋತು ಸುಣ್ಣ ವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಬಸನಗೌಡ ತುರ್ವಿಹಾಳ ಅವರ ಭರ್ಜರಿ ಗೆಲುವು ಕಾಂಗ್ರೆಸ್ ನಾಯಕರಿಗೆ ಹೊಸ ಆಕ್ಸಿಜನ್ ನೀಡಿರುವುದು ಸತ್ಯ.
ಮಸ್ಕಿ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಆಖಾಡದಲ್ಲಿ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದ ದಂಡು ಅಬ್ಬರದ ಪ್ರಚಾರ ನಡೆಸಿದ್ದರೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಎದುರು ೩೦೬೦೬ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ರಾಜ್ಯದ ಗಮನ ಸೆಳೆದಿದ್ದ ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಚುನಾವಣೆ ತಂತ್ರ ಗಾರಿಕೆ, ಜಾತಿ ಟ್ರಂಪ್ ಕಾರ್ಡ್ ವರ್ಕೌಟ್ ಆಗದ ಕಾರಣ ಮಸ್ಕಿಯಲ್ಲಿ ಬಿಜೆಪಿ ಕಮಲ ಅರಳದೆ ಮುದಡಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಭರ್ಜರಿ ಗೆಲುವು ಸಾಧಿಸಿದ್ದಾರೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಆಘಾತ ಕಾರಿ ಸೋಲು ಅನುಭವಿಸಿದ್ದಾರೆ. ಉಪ ಚುನಾವಣೆ ಪ್ರಚಾರದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ, ಅನೇಕ ಸಚಿವರು, ಶಾಸಕರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ. ವಿಜಯೇಂದ್ರ ಕ್ಷೇತ್ರದಲ್ಲಿ ಬಿಡಾರ ಹೂಡಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ಗೆಲುವಿಗೆ ರಣ ತಂತ್ರ ಹಣೆದಿದ್ದರೂ.
ಮತದಾರರ ಮೇಲೆ ಯಾವದೇ ರೀತಿಯ ಪ್ರಭಾವ ಬೀರಿಲ್ಲ ಉಪ ಚುನಾವಣೆ ಚಾಣಕ್ಯ ಬಿವೈ. ವಿಜಯೇಂದ್ರ ಅವರ ಚುನಾವಣೆ ತಂತ್ರ ಫಲ ನೀಡಲಿಲ್ಲ ಅನುಕಂಪ ಮತ್ತು ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆಲುವಿನ ದಡ ಸಲೀಸಾಗಿ ಸೇರಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ನಿಂದ ಪ್ರತಾಪಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದರು ಬಸನಗೌಡ ತುರ್ವಿಹಾಳ ಕೇವಲ ೨೧೩ ಮತಗಳ ಅಂತರದಿಂದ ಪ್ರತಾಪಗೌಡ ಪಾಟೀಲ್ ವಿರುದ್ದ ಸೋಲು ಕಂಡಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ಕೈ ಬಿಟ್ಟು ಬಿಜೆಪಿ ಕಮಲ ಹಿಡಿದಿದ್ದರೆ ಬಸನಗೌಡ ತುರ್ವಿಹಾಳ ಬಿಜೆಪಿ ಕಮಲ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿದ್ದರು ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಕ್ಷ ಮಾತ್ರ ಅದಲು ಬದಲಾಗಿದ್ದವು ಬಸನಗೌಡ ತುರ್ವಿಹಾಳ ಪ್ರತಾಪಗೌಡರನ್ನು ೩೦೬೦೬ ಸಾವಿರ ಮತಗಳಿಂದ ಸೋಲಿಸಿ ಸೇಡು ತೀರಿಸಿ ಕೊಂಡಿದ್ದಾರೆ.
ಬಿಜೆಪಿಯ ನೋಟ್ ಕಾಂಗ್ರೆಸ್‌ಗೆ ವೋಟ್ ಎಂದಿದ್ದ ಮತದಾರರು ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರ ಕೈ ಹಿಡಿದಿದ್ದಾರೆ ಸತತ ಮೂರು ಸಲ ಗೆದ್ದು ಹ್ಯಾಟ್ರಿಕ್ ಹೀರೋ ಎನ್ನಿಸಿ ಕೊಂಡಿದ್ದ ಪ್ರತಾಪಗೌಡ ಪಾಟೀಲ್ ಅವರಿಗೆ ಮತದಾರರು ಮನೆ ದಾರಿ ತೋರಿಸಿದ್ದಾರೆ ಪ್ರತಾಪಗೌಡ ಪಾಟೀಲ್ ಅವರ ಜತೆಗಿದ್ದು ಕೆಲ ಬಿಜೆಪಿ ಮುಖಂಡರು ಪ್ರತಾಪಗೌಡ ಪಾಟೀಲ್ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಪ ಚುನಾವಣೆ ಪ್ರಚಾರದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ, ಉಪ ಮುಖ್ಯ ಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಚೋಳ, ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು, ಸುರಪೂರ ಶಾಸಕ ರಾಜುಗೌಡ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ಕೈ ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವು ಕುಮಾರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ,ಬೋಸರಾಜ, ಶಿವರಾಜ ತಂಗಡಗಿ ಸೇರಿದಂತೆ ಅನೇಕ ಮುಖಂಡರು ಬಸನಗೌಡ ತುರ್ವಿಹಾಳ ಪರ ಒಗ್ಗಟ್ಟಿನ ಪ್ರಚಾರ ನಡೆಸಿದ್ದು ಪ್ರತಾಪ ಗೌಡ ಪಾಟೀಲ್ ಅವರ ಆಡಳಿತ ವಿರೋಧಿ ಅಲೆಯಲ್ಲಿ ಬಸನಗೌಡ ತುರ್ವಿಹಾಳ ಗೆಲುವಿನ ದಡ ಸೇರಿದ್ದಾರೆ.
ಉಪ ಚುನಾವಣೆಯಲ್ಲಿ ೫ಎ ಕಾಲುವೆ ನೀರಾವರಿ ಹೋರಾಟ ಭಾರಿ ಸದ್ದು ಮಾಡಿತ್ತು ೫ಎ ಕಾಲುವೆ ಅನುಷ್ಟಾನ ಗೊಳಿಸಲು ನಿರ್ಲಕ್ಷ್ಯ ವಹಿಸಿರುವ ಸರಕಾರದ ವಿರುದ್ದ ಅನ್ನದಾತರು ಸಿಡಿದೆದ್ದಿದ್ದರು ಹೀಗಾಗಿ ಈ ಭಾಗದ ರೈತರು ಬಿಜೆಪಿ ಅಭ್ಯರ್ಥಿಯ ಬುಡಕ್ಕೆ ನೀರು ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಸನ ಗೌಡ ತುರ್ವಿಹಾಳ ಗೆಲುವಿನ ಸುದ್ದಿ ತಿಳಿದು ಕೈ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು ಬಿಜೆಪಿ ಪಾಳೇಯದಲ್ಲಿ ನೀರವ ಮೌನ ಕಂಡು ಬಂತು.

ಕೋಟ್ ಃ
ಉಪ ಚುನಾವಣೆಯಲ್ಲಿ ಮೂಲ ಬಿಜೆಪಿ ಮುಖಂಡರನ್ನು ಕಡೆಗಣಿಸಿದ ಕಾರಣ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಸೋಲಾಗಿದೆ ಯಾರೇ ಆಗಲಿ ಮತದಾರರ ತೀರ್ಪಿಗೆ ತೆಲೆ ಬಾಗಬೇಕು.
ಬಸವರಾಜ ಪಾಟೀಲ್, ಅನ್ವರಿ,
ಬಿಜೆಪಿ ಹಿರಿಯ ಮುಖಂಡ

ಕೋಟ್ ಃ
ಹಣ ಮತ್ತು ಜನ ಬಲದ ನಡುವೆ ನಡೆದಿದ್ದ ಉಪ ಚುನಾವಣೆಯಲ್ಲಿ ಮತದಾರರು ಹಣದ ಆಮಿಶಕ್ಕೆ ಒಳಗಾಗದೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಉಪ ಚುನಾವಣೆಯಲ್ಲಿ ಜನ ಬಲಕ್ಕೆ ಅಭೂತ ಪೂರ್ವ ಜಯ ಸಿಕ್ಕಿದೆ.
ಅಮರೇ ಗೌಡ
ಬಯ್ಯಾಪೂರ. ಕುಷ್ಟಗಿ ಶಾಸಕ.