ಕಾಂಗ್ರೆಸ್ ಪಕ್ಷಕ್ಕೆ ದಿ. ಲಕ್ಷ್ಮಣರಾವ್ ನಿಸ್ವಾರ್ಥ ಸೇವೆ: ಬೆನಕನಳ್ಳಿಯವರಿಗೆ ಪರಿಷತ್ ಸ್ಥಾನ ನೀಡಲು ಒತ್ತಾಯ

ಕಲಬುರಗಿ, ಜೂ.20: ಹೈದ್ರಾಬಾದ್ ಕರ್ನಾಟಕದ ಕೋಲಿ ಸಮಾಜದ ಪಿತಾಮಹ ಎಂದೇ ಕರೆಯಲ್ಪಟ್ಟಿದ್ದ ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರು ಇಡೀ ತಮ್ಮ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ನಿಸ್ವಾರ್ಥದಿಂದ ಮುಡುಪಿಟ್ಟರು. ಅಂತಹ ಕುಟುಂಬಕ್ಕೆ ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರವು ಸೂಕ್ತ ಸ್ಥಾನಮಾನ ಕೊಡಬೇಕು. ಆ ಹಿನ್ನೆಲೆಯಲ್ಲಿ ಅಶೋಕಕುಮಾರ್ ಎಲ್. ಬೆನಕನಳ್ಳಿ ಅವರಿಗೆ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಬೇಕು ಎಂದು ಅಹಿಂದ್ ವರ್ಗದ ಮುಖಂಡ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ಧರ್ಮವೀರ್ ಪಟ್ಟಣ್ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರು ಕೋಲಿ ಸಮಾಜ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವೀ ಮುಖಂಡರಾಗಿದ್ದರು. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಅವರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು ಎಂದರು.

ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ದಿ. ರಾಜೀವಗಾಂಧಿ, ದಿ. ಸಂಜಯಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ದಿ. ದೇವರಾಜ್ ಅರಸು, ದಿ. ವೀರೇಂದ್ರ ಪಾಟೀಲ್, ದಿ. ಧರ್ಮಸಿಂಗ್, ಎಐಸಿಸಿಐ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಚಿವ ಮೊಹ್ಮದ್ ಅಲಿ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಇಕಬಾಲ್ ಅಹ್ಮದ್ ಸರಡಗಿ ಮುಂತಾದವರೆಲ್ಲರೂ ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇಂದಿರಾಗಾಂಧಿ, ದೇವರಾಜ್ ಅರಸು ಅವರು ಜಿಲ್ಲೆಗೆ ಭೇಟಿ ನೀಡುವ ಮೊದಲೇ ಮೊದಲ ಮಾಹಿತಿ ಲಕ್ಷ್ಮಣರಾವ್ ಅವರಿಗೆ ಸಿಗುತ್ತಿತ್ತು ಎಂದು ಅವರು ಹೇಳಿದರು.

ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರು ನೆಹರೂ ಗಂಜ್‍ದಲ್ಲಿ ಹೊಟೇಲ್ ಮತ್ತು ಖಾನಾವಳಿಯನ್ನು ಹೊಂದಿದ್ದರು. ಅಲ್ಲಿಗೆ ಗ್ರಾಮೀಣ ಪ್ರದೇಶದಿಂದ ಬಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಚಿತವಾಗಿ ಊಟ, ಉಪಹಾರ ಕೊಡುತ್ತಿದ್ದರು. ಅಷ್ಟೇ ಅಲ್ಲದೇ ರಾತ್ರಿ ಏನಾದರೂ ಊರಿಗೆ ಹೋಗಲಾಗದಿದ್ದರೆ ಅಲ್ಲಿಯೇ ವಾಸ್ತವ್ಯವನ್ನು ಹೂಡುತ್ತಿದ್ದರು. ಅದೇ ರೀತಿ ಲಕ್ಷ್ಮಣರಾವ್ ಬೆನಕನಳ್ಳಿಯವರ ಲಾಲ್‍ಗಿರಿ ಕ್ರಾಸ್‍ನ ವಾಣಿಜ್ಯಕ ಸ್ಥಳದಲ್ಲಿಯೇ ಕಾಂಗ್ರೆಸ್ ಮುಖಂಡರು ಕಾರ್ಯ ಚಟುವಟಿಕೆಗಳ ಕುರಿತು ಸಮಾಲೋಚನೆ ಮಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೂ ಸಹ ಅದೇ ಸ್ಥಳದಲ್ಲಿ ಸಮಾಲೋಚನೆ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.

ಮಾಜಿ ಸಂಸದ ದಿ. ಕೊಲ್ಲೂರು ಮಲ್ಲಪ್ಪ, ಅವರ ಪುತ್ರ ದಿ. ರಾಜಶೇಖರ್ ಕೊಲ್ಲೂರ್, ದಿ. ಚಂದ್ರಶೇಖರ್ ಪಾಟೀಲ್, ಗಂಗಾಧರ್ ನಮೋಶಿ ಅವರಂತಹ ಹಿರಿಯ ಮುಖಂಡರೂ ಸಹ ದಿ. ಲಕ್ಷ್ಮಣರಾವ್ ಅವರಿಗೆ ಪ್ರಭಾವಿ ರಾಜಕಾರಣಿಯೆಂದು ಪರಿಗಣಿಸಿದ್ದರು. ಕೆ.ಟಿ. ರಾಠೋಡ್ ಅವರು ಮೀನುಗಾರಿಕೆ ಮತ್ತು ಬಂದರು ಸಚಿವರಾಗಿದ್ದಾಘ ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರಿಗೆ ಮೀನುಗಾರಿಕೆ ಮಂಡಳಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದರು. ಆಗ ಸ್ವತ: ಮಲ್ಲಿಕಾರ್ಜುನ್ ಖರ್ಗೆಯವರೇ ತಂತಿ ಸಂದೇಶದ ಮೂಲಕ ಹರ್ಷ ವ್ಯಕ್ತಪಡಿಸಿದ್ದರು. ಆದಾಗ್ಯೂ, ಲಕ್ಷ್ಮಣರಾವ್ ಅವರು ಅದನ್ನು ಒಪ್ಪದೇ ಸಕ್ರೀಯ ಕಾರ್ಯಕರ್ತನಾಗಿ ಇರುವುದಾಗಿ ನಯವಾಗಿ ತಿರಸ್ಕರಿಸಿದರು. ಅಂತಹ ಸಂಗತಿಯನ್ನು ಸ್ವತ: ಖರ್ಗೆಯವರೇ ಸಭೆಯಲ್ಲಿ ಹೇಳುವ ಮೂಲಕ ಬೆನಕನಳ್ಳಿಯವರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ್ದರು ಎಂದು ಅವರು ಹೇಳಿದರು.

1972ರಲ್ಲಿ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣರಾವ್ ಬೆನಕನಳ್ಳಿಯವರಿಗೆ ಟಿಕೆಟ್ ಕೊಡಲು ನಿರ್ಧರಿಸಲಾಗಿತ್ತು. ಆಗಿನ ವಿಜಯಪುರ ಸಂಸದ ದಿ. ಬಿ.ಇ. ಚೌಧರಿ ಅವರು ಬೆನಕನಳ್ಳಿಯವರ ಹೆಸರು ಪ್ರಸ್ತಾಪಿಸಿದರು. ಸಂಸದೀಯ ಆಯ್ಕೆ ಮಂಡಳಿಗೂ ಕೇವಲ ಅವರ ಹೆಸರೊಂದೇ ಹೋಗಿತ್ತು. ಸಂಸದೀಯ ಮಂಡಳಿಯ ಬಂದ ಸಂದರ್ಭದಲ್ಲಿ ಬೆನಕನಳ್ಳಿಯವರು ತಮಗೆ ಟಿಕೆಟ್ ಬೇಡ. ಬದಲಿಗೆ ಚಿಂಚೋಳಿ ಕ್ಷೇತ್ರದಲ್ಲಿ ದಿ. ದೇವೆಂದ್ರಪ್ಪ ಘಾಳೆಪ್ಪ ಅವರಿಗೆ ಕೊಡಲು ಹೇಳಿ ಅವರಿಗೆ ಟಿಕೆಟ್ ಕೊಡಿಸಿದರು. ಪರಿಣಾಮ ಅವರು ಶಾಸಕರಾಗಿ, ಸಚಿವರಾಗಿ ಜನಪ್ರೀಯಗೊಂಡರು. ಕೋಲಿ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿದ ಶ್ರೇಯಸ್ಸು ಬೆನಕನಳ್ಳಿಯವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕದಲ್ಲಿ ಕೋಲಿ ಸಮಾಜವು ಹಿಂದುಳಿದಿದ್ದು, ಸಮಾಜವನ್ನು ಎತ್ತರಿಸಲು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂಧೆ ಬರುವ ರೀತಿಯಲ್ಲಿ ಲಕ್ಷ್ಮಣರಾವ್ ಬೆನಕನಳ್ಳಿಯವರು 1965ರಲ್ಲಿಯೇ ಹೈದ್ರಾಬಾದ್ ಕರ್ನಾಟಕ ಕೋಲಿ ಸಮಾಜವನ್ನು ಹುಟ್ಟುಹಾಕಿದರು. ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ವಸತಿ ನಿಲಯ ಆರಂಭಿಸಿದರು. ಅಲ್ಲಿ ಕಲಿತತವರು ಅನೇಕರು ಜಿಲ್ಲಾಧಿಕಾರಿಗಳಾಗಿ, ಡಿವೈಎಸ್‍ಪಿಯಾಗಿ, ಸಹಾಯಕ ಆಯುಕ್ತರಾಗಿ, ತಹಸಿಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕರು ಅನೇಕ ಹುದ್ದೆಗಳಿಗೆ ಹೋಗಿದ್ದಾರೆ. ಹೀಗಾಗಿ ದಿ. ಲಕ್ಷ್ಮಣರಾವ್ ಬೆನಕನಳ್ಳಿ ಅವರು ಕೋಲಿ ಸಮಾಜದ ಸಂಪತ್ತು ಆಗಿದ್ದರು ಎಂದು ಬಣ್ಣಿಸಿದ ಅವರು, ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಲು 1969ರ ಸೆಪ್ಟೆಂಬರ್‍ನಲ್ಲಿ ಸಚಿವ ಸಂಪುಟ ಅನುಮೋದನೆ ಪಡೆದುಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದರಲ್ಲಿ ಬೆನಕನಳ್ಳಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ಹೇಳಿದರು.

ದಿ. ಲಕ್ಷ್ಮಣರಾವ್ ಬೆನಕನಳ್ಳಿಯವರದು ದೊಡ್ಡ ಕುಟುಂಬವಾಗಿತ್ತು. ಪತ್ನಿ ಅಂಬವ್ವ, ಸುಭಾಷಚಂದ್ರ, ಪ್ರಭಾಕರ್, ಅಶೋಕಕುಮಾರ್, ಇಂದುಮತಿ, ಪ್ರಕಾಶ್, ಲಲಿತಾ, ರಮೇರ್ಶ, ಸುರೇಶ್, ವಿಲಾಸ್, ನಿರ್ಮಲಾ ಮುಂತಾದ ಹತ್ತು ಮಕ್ಕಳು ಸಹ ಅವರ ದಾರಿಯಲ್ಲಿಯೇ ಸಾಗಿದ್ದಾರೆ. ಸುಭಾಷಚಂದ್ರ ಅವರು ಹಿರಿಯ ಸಾಮಾಜಿಕ ಕಾರ್ಯಕರ್ತರು. ಪ್ರಕಾಶ್ ಅವರು ಪಾಲಿಕೆಯ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಿ. ದೇವರಾಜ್ ಅರಸು ಅವರು ಬೆನಕನಳ್ಳಿಯವರಿಗೆ ಸರ್ಕಾರದಿಂದ ನಿವೇಶನ ಕೊಡಲು ನಿರ್ದೇಶನ ನೀಡಿದರು. ಅದರಂತೆ ತಹಸಿಲ್ದಾರರು ಪ್ರಕಾಶ್ ಅವರಿಗೆ ಸಿಟಿ ಬಸ್ ನಿಲ್ದಾಣ, ನೂತನ ವಿದ್ಯಾಲಯ ಎದುರಿನ ಮೂರು ಮೂಲೆಯ ಸ್ಥಳ, ಶ್ರೀ ಶರಣಬಸವೇಶ್ವರ್ ಕಾಲೇಜು ಹಿಂಭಾಗದ ನೀರಿನ ಟ್ಯಾಂಕ್ ಬಳಿ ಸೇರಿ ಮೂರು ನಿವೇಶನಗಳನ್ನು ತೋರಿಸಿದರು. ಆ ನಿವೇಶನಗಳೂ ಸಹ ಬೇಡ ಎಂದು ಬೆನಕನಳ್ಳಿಯವರು ನಿರಾಕರಿಸಿದರು ಎಂದು ಅವರು ತಿಳಿಸಿದರು.

ಇನ್ನು ಅಶೋಕಕುಮಾರ್ ಎಲ್. ಬೆನಕನಳ್ಳಿ ಅವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. 37 ವರ್ಷಗಳ ಕಾಲ ಸಹಾಯಕ ಸಂಚಾರಿ ವ್ಯವಸ್ಥಾಪಕರಾಗಿ, ಕರ್ನಾಟಕ ಸರ್ಕಾರದ ಸೆಕ್ರೆಟರಿಯೇಟ್‍ನಲ್ಲಿ ಹಾಗೂ ವಿಶೇಷ ಅಧಿಕಾರಿಗಳಾಗಿ, ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಿಗೆ ರಾಜ್ಯ ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಮಾಡಬೇಕು ಎಂದು ಧರ್ಮವೀರ್ ಪಟ್ಟಣ್ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಂಕರ್ ಪಡಶೆಟ್ಟಿ, ರಾಜು ಎಂ. ಗಾಣಗಾಪೂರ್, ಮೋಯಿನ್ ತಂದೆ ಜಮಾನುದ್ದೀನ್ ಶೇಖ್, ಪಿತಂಬರ್ ಕಲಗುರ್ತಿ ಮುಂತಾದವರು ಉಪಸ್ಥಿತರಿದ್ದರು.