ಕಾಂಗ್ರೆಸ್ ನ ಕೊಂಡಯ್ಯನವರನ್ನು ಬಿಜೆಪಿಗೆ ಬನ್ನಿ ಎಂದ ಸಚಿವ ಈಶ್ವರಪ್ಪ

ಬಳ್ಳಾರಿ, ಜೂ.08: ನಮ್ಮ ಬಿಜೆಪಿ ಪಕ್ಷಕ್ಕೆ ಬನ್ನಿ ನಾವೂ ಎಂ ಎಲ್ ಸಿ ಮಾಡ್ತೀವಿ ಎಂದು ಕಾಂಗ್ರೆಸ್ ಪಕ್ಷದ ಎಂ ಎಲ್ ಸಿ ಕೆ.ಸಿ.ಕೊಂಡಯ್ಯ ಅವರಿಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಿನ್ನೆ ನಗರಕ್ಕೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಈಶ್ವರಪ್ಪ ಅವರನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಸುತ್ತಮುತ್ತ ಇದ್ದವರಿಗೆ ಈ ಸನ್ಮಾನ ಯಾಕೆ ಎಂಬ ಪ್ರಶ್ನೆ ಕಾಡತೊಡಗಿತು. ಅಷ್ಟರಲ್ಲೆ ಅಲ್ಲಿಯೇ ಇದ್ದ ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಸಧ್ಯದಲ್ಲೇ ಎಂ.ಎಲ್.ಸಿ ಚುನಾವಣೆ ಇದೆ ಸರ್ ಎಂದರು.
ಹೌದಾ ಹಾಗಾದರೆ ನಮ್ಮ ಪಕ್ಷಕ್ಕೆ ಬನ್ನಿ ನಾವೇ ಎಂಎಲ್ ಸಿ‌ ಮಾಡ್ತೀವಿ ಎಂದು ನಗುತ್ತಲೇ ಹೇಳಿದರು.
ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿದ ಕೊಂಡಯ್ಯ ಅವರು ಇಲ್ಲಾ, ನಾನು ನನ್ನ ರಾಜಕೀಯ ಜೀವನದ ಆರಂಭದಿಂದ ಕಾಂಗ್ರೆಸ್ ನಲ್ಲೇ ಇರುವೆ, ನಮ್ಮ ಸಿದ್ದಾಂತವೇ ಬೇರೆ ನಿಮ್ಮ‌ಸಿದ್ದಾಂತಚೇ ಬೇರೆ ಹಾಗಾಗಿ ನಿಮ್ಮ ಪಕ್ಷಕ್ಕೆ ಬರುವ ಪ್ರಮೇಯ ಇಲ್ಲ ಎಂದರು.
ಸನ್ಮಾನಿಸಿದ್ದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ನಮ್ಮ ಊರಿಗೆ ಯಾವುದೇ ಸಚಿವರು ಬಂದು ಸಭೆ ನಡೆಸಿದಾಗ, ಅಲ್ಲಿ ನಾನು ಪಾಲ್ಗೊಂಡರೆ ಅವರನ್ನು ಸನ್ಮಾನಿಸುವ ಸಂಪ್ರದಾಯ ನನ್ನದು ಎಂದರು.