ಕಾಂಗ್ರೆಸ್ ನ್ನು  ಅಧಿಕಾರಕ್ಕೆ ತನ್ನಿ; ಖರ್ಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.09: ಈ ಬಾರಿಯ  ಚುನಾವಣೆ ಅತ್ಯಂತ ಮಹತ್ವ ಪಡೆದಿದ್ದು, ಕೆಟ್ಟ, 40% ಸರ್ಕಾರವನ್ನು ದೂರಮಾಡಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಅವರು ನಿನ್ನೆ ಸಂಜೆ, ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಈ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಈ ಭಾಗಕ್ಕೆ 371(ಜೆ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಬಳ್ಳಾರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಅನುಕೂಲವಾಗಿದ್ದು, ವೈದ್ಯಕೀಯ, ಇಂಜಿನೀಯರಿಂಗ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ.  ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲು ಅನುಕೂಲವಾಗಲಿದೆಂದರು.
ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ. ಖಾತೆಗೆ ಹದಿನೈದು ಲಕ್ಷ ಹಾಕುವುದಾಗಿ ಹೇಳಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವುದಾಗಿಯೂ ಹೇಳಿದ್ದರು. ಇಲ್ಲಿಯವರೆಗೂ ಯಾವುದನ್ನೂ ಸಹ ನೀಡಿಲ್ಲ ಎಂದು ಮಳೆಯಲ್ಲೇ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ  ಐದು ಗ್ಯಾರೆಂಟಿ ಯೋಜನೆಗಳನ್ನು ಈಗಾಗಲೇ ಘೋಷಿಸಿದೆಂದು ವಿವರಿಸಿದರು.
ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ ಮಾತನಾಡಿ, ಅಭಿವೃಧದಿ ಎನ್ಮುತ್ತ ಬಳ್ಳಾರಿಯನ್ನು ಲೂಟಿ ಹೊಡೆದವರಿಗೆ ಮತಹಾಕಬೇಡಿ.  ನಾಡಿದ್ದು ನೀವು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಒಂದೊಂದು ಮತ ಅವರ ಮುಖಕ್ಕೆ ಹೊಡೆದಂತಾಗಬೇಕು ಎಂದರು
ರಾಜ್ಯಸಭೆ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್ ಮಾತನಾಡಿದರು. ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ,  ಜೆ.ಎಸ್.ಆಂಜನೇಯಲು, ಪಾಲಿಕೆ ಮೇಯರ್ ಡಿ.ತ್ರಿವೇಣಿ, ಹಿರಿಯ ಮುಖಂಡ ಮುಂಡ್ರಿಗಿ ನಾಗರಾಜ್, ಎ.ಮಾನಯ್ಯ, ಮಾಜಿ ಉಪಮೇಯರ್ ಬೆಣಕಲ್ ಬಸವರಾಜ ಸೇರಿ ಹಲವರು ಇದ್ದರು.