ಕಾಂಗ್ರೆಸ್ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

ತುಮಕೂರು, ಜೂ. ೬- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿರುವ ವಿದ್ಯುತ್ ದರ ಏರಿಕೆ, ಗೋಹತ್ಯೆ ನಿಷೇಧ ರದ್ದತಿ ವಿರುದ್ಧ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಧೋರಣೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಹಿಂದೂ ಧರ್ಮೀಯರಲ್ಲಿ ಗೋಮಾತೆಗೆ ಪೂಜನೀಯ ಸ್ಥಾನ ಕಲ್ಪಿಸಲಾಗಿದೆ. ಇಂತಹ ಪೂಜನೀಯ ಆಕಳನ್ನು ವಧೆ ಮಾಡುವ ಹೀನಕೃತ್ಯಕ್ಕೆ ಅವಕಾಶ ಮಾಡಿಕೊಡುವ ಕಾಯ್ದೆಯನ್ನು ಮತ್ತೆ ತರುವ ಕಾಂಗ್ರೆಸ್ ಸರ್ಕಾರದ ಚಿಂತನೆ ಸರಿಯಲ್ಲ. ಪಶುಸಂಗೋಪನಾ ಸಚಿವರು ಹಾಗೂ ಕಾಂಗ್ರೆಸ್ ಶಾಸಕರುಗಳು ನೀಡುತ್ತಿರುವ ಹೇಳಿಕೆ ಖಂಡನೀಯ ಎಂದರು.
ಜಾನುವಾರುಗಳ ವಧೆಗೆ ಅವಕಾಶವಾಗುವ ಕಾಯ್ದೆ ಮರಳಿ ಜಾರಿಗೆ ತರಲು ಮುಂದಾದರೆ ಬಿಜೆಪಿ ಜನರೊಂದಿಗೆ ಸೇರಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಒಂದು ಸಮುದಾಯದ ಮತ ಬ್ಯಾಂಕ್‌ಗಾಗಿ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡಬಾರದು ಎಂದು ಆಗ್ರಹಿಸಿದ ಅವರು, ಗ್ಯಾರೆಂಟಿ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರೆಂಟಿಗಳ ಮೇಲೆ ಷರತ್ತುಗಳನ್ನು ವಿಧಿಸುವ ಮೂಲಕ ಜನರನ್ನು ವಂಚಿಸಲು ಹೊರಟಿದೆ ಎಂದು ಕಿಡಿಕಾರಿದರು.
ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಕೂಡಲೇ ದರ ಹಿಂಪಡೆದು ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಬೇಕು. ಗ್ಯಾರೆಂಟಿಗಳ ಜಾರಿಗೆ ಹಣಕಾಸು ಹೊಂದಿಸಲು ಸಾಧ್ಯವಾಗದೆ ರೈತರ ಹಾಲಿನ ದರದಲ್ಲೂ ಕಡಿತ ಮಾಡಿದ್ದು, ಕೂಡಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ೭ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ನಗರಾಧ್ಯಕ್ಷ ಹನುಮಂತರಾಜು, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಚಿದಾನಂದ್, ವೇದಮೂರ್ತಿ, ವಿರೂಪಾಕ್ಷಪ್ಪ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ಸಿ.ಎನ್. ರಮೇಶ್, ವಿಷ್ಣುವರ್ಧನ್, ಅನುಸೂಯಮ್ಮ, ಹನುಮಂತರಾಯಪ್ಪ, ವೆಂಕಟೇಶಾಚಾರ್, ರವೀಶ್, ಸತ್ಯಮಂಗಲ ಜಗದೀಶ್ ಮತ್ತಿತರರು ಭಾಗವಹಿಸಿದ್ದರು.