ಕಾಂಗ್ರೆಸ್ ನಿರುದ್ಯೋಗಿಗಳ ಕೂಟ

ಮೈಸೂರು,ನ.೨೫- ಕಾಂಗ್ರೆಸ್ ಪಕ್ಷ ನಿರುದ್ಯೋಗಿಗಳ ಕೂಟ, ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡುವುದನ್ನು ಬಿಟ್ಟು ಬೇರೇನೂ ಕೆಲಸವಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಲ್ಲಿ ಹುರುಳಿಲ್ಲ. ಮುಖ್ಯಮಂತ್ರಿಗಳು ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಓಡಾಡುವುದಿಲ್ಲ ಎಂದು ಹರಿಹಾಯ್ದರು.
ಮಳೆಯಿಂದ ಅಪಾರ ಹಾನಿಯಾಗಿದೆ. ಈ ಬಗ್ಗೆ ಆ ವರದಿಗಳನ್ನು ತರಿಸಿಕೊಂಡು ಸರ್ಕಾರ ಕಾನೂನಿನಂತೆ ಪರಿಹಾರ ನೀಡುತ್ತಿದೆ. ಇಷ್ಟಾದರೂ ಕೆಲಸವಿಲ್ಲದ ಕಾಂಗ್ರೆಸ್ ನಾಯಕರುಗಳಾದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟೀಕೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಮಳೆಯಿಂದ ತೊಂದರೆಗೊಳಗಾಗಿರುವವರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದೆ, ಪರಿಹಾರವನ್ನೂ ನೀಡುತ್ತಿದೆ ಇಷ್ಟಾದರೂ ಕಾಂಗ್ರೆಸ್ ನಾಯಕರು ಮಾತ್ರ ಮಾಡಲು ಕೆಲಸವಿಲ್ಲದೆ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಎಂದರೂ ೧೫ ಸ್ಥಾನಗಳಲ್ಲಿ ಗೆಲುವುದು ನಿಶ್ಚಿತ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತಕ್ಕೆ ೧೨ ಸ್ಥಾನಗಳ ಅಗತ್ಯವಿದ್ದು, ಈ ಚುನಾವಣೆ ನಂತರ ಪರಿಷತ್‌ನಲ್ಲಿ ಬಿಜೆಪಿ ಬಹುತ ಹೊಂದಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.