ಕಾಂಗ್ರೆಸ್ ನಿಂದ ಹಿಂದೂ ಸಮಾಜಕ್ಕೇ ಅವಮಾನ: ಈಶ್ವರಪ್ಪ

ಹುಬ್ಬಳ್ಳಿ, ಮೇ 5: ಭಜರಂಗದಳ ನಿಷೇಧ ಮಾಡುತ್ತೇವೆನ್ನುವ ಮೂಲಕ ಕಾಂಗ್ರೆಸ್ ಹಿಂದೂ ಸಮಾಜವನ್ನು ಅವಮಾನ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಭರವಸೆ ನೀಡುವ ಮೂಲಕ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ದೇಶ ರಕ್ಷಣೆ, ರಾಷ್ಟ್ರ ಭಕ್ತಿ ನಿರ್ಮಾಣ ಕಾರ್ಯದಲ್ಲಿ ಭಜರಂಗದಳ ತೊಡಗಿದ್ದು ಇಂಥ ಸಂಘಟನೆಯನ್ನು ಪಿ.ಎಫ್.ಐ. ಜೊತೆಗೆ ಹೋಲಿಕೆ ಮಾಡಿ ನಿಷೇಧ ಮಾಡಲು ಹೊರಟಿದ್ದು ದುರಂತ ಎಂದ ಅವರು ಕಾಂಗ್ರೆಸ್‍ನ ಧರ್ಮ ವಿರೋಧಿ ಪ್ರಣಾಳಿಕೆ ಖಂಡನೀಯ ಎಂದರು.
ಆರ್.ಎಸ್.ಎಸ್. ನ ಮಹತ್ವ ತಿಳಿದಿರುವ ಮಾಜಿ ಸಿ.ಎಂ. ಜಗದೀಶ ಶೆಟ್ಟರ್ ಭಜರಂಗದಳ ನಿಷೇಧ ಪ್ರಣಾಳಿಕೆಯನ್ನು ಜನರ ಮುಂದೆ ಹೇಗೆ ಒಯ್ಯುತ್ತಾರೆ? ಅವರ ಸ್ವಾಭಿಮಾನ ಎಲ್ಲಿ ಹೋಯ್ತು? ಮತಕ್ಕಾಗಿ ಶೆಟ್ಟರ್ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರಾ? ಎಂದು ಈಶ್ವರಪ್ಪ ಕಟುವಾಗಿ ಪ್ರಶ್ನಿಸಿದರು.
ಶೆಟ್ಟರ್ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ, ಶೆಟ್ಟರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೇಲೆ ಈವರೆಗೂ ಗೌರವವಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪ ಎಂದಿರುವುದು ಖಂಡನೀಯ, ಅಲ್ಲದೇ ಮೋದಿಯವರನ್ನು ನಾಲಾಯಕ್ ಎಂದು ಕರೆಯುವ ಪ್ರಿಯಾಂಕ್ ಖರ್ಗೆ ಆನೆಯ ಮುಂದೆ ತಿಗಣೆ ಇದ್ದ ಹಾಗೆ ಎಂದು ಅವರು ಚುಚ್ಚಿದರು.