ಕಾಂಗ್ರೆಸ್ ನಿಂದ ಮುಂದೆಯೂ ಉತ್ತಮ ಯೋಜನೆ, ಬಿಜೆಪಿ ವಿರುದ್ದ ರಾಹುಲ್ ಕಿಡಿ

ದಾವಣಗೆರೆ, ಆ.3- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು‌‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಮುಂದೆಯೂ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭರವಸೆ ‌ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ನೀಡಿದ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರಾಜ್ಯದ ಜನತೆ ಇಂದಿಗೂ ಸ್ಮರಿಸುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ 75 ನೇ ಅಮೃತ ಮಹೋತ್ಸವದಲ್ಲಿ ಮಾತನಾಡಿದ ರಾಹುಲ್, ರಾಜ್ಯ ಹಾಗೂ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ನೋಟು ರದ್ಧತಿಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದರು. ಈ ಕ್ರಮದ ಹಿಂದಿನ ಉದ್ದೇಶ ಕೆಲವೇ ಕೆಲ ಉದ್ಯಮಿಗಳಿಗೆ ಹಣ ವರ್ಗಾವಣೆ ಮಾಡುವುದೇ ಆಗಿತ್ತು. ಕಾರ್ಮಿಕರು, ರೈತರನ್ನು ನಾಶ ಮಾಡಲೆಂದೇ ಜಿಎಸ್​ಟಿ ಜಾರಿ ಮಾಡಿದರು ಎಂದು ಕೇಂದ್ರದ ‌ಹರಿಹಾಯ್ದರು.
ಪ್ರಪಂಚದ ಭೂಪಟದಲ್ಲಿ ಕರ್ನಾಟಕವನ್ನು ಕಾಣಿಸುವಂತೆ ಮಾಡಿದ್ದು ಕಾಂಗ್ರೆಸ್​. ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ ಜನರು ಯಾವುದೇ ಭಯವಿಲ್ಲದೆ ಬದುಕುತ್ತಿದ್ದರು. ಆದರೆ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಜೆಯಾಗುತ್ತಿದೆ ಎಂದು ದೂರಿದರು.
ಯಾವುದೇ ಉದ್ಯಮ, ವ್ಯಾಪಾರ ಯಶಸ್ವಿಯಾಗಲು ಶಾಂತಿ ಪ್ರಮುಖವಾಗಿರುತ್ತದೆ. ಆದರೆ, ಈಗಿನ ಬಿಜೆಪಿ ಸರ್ಕಾರಕ್ಕೆ ಜನರ ಜೀವನದ ಬಗ್ಗೆ ಬದ್ಧತೆ ಇಲ್ಲ. ವ್ಯಾಪಕ ರೀತಿಯಲ್ಲಿ ವ್ಯಾಪಕ ರೀತಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ರಾಹುಲ್ ಕಿಡಿಕಾರಿದರು.