ಕಾಂಗ್ರೆಸ್ ನಿಂದ ಮಾತ್ರ  ಸರ್ವ ಜನಾಂಗದ  ಅಭಿವೃದ್ಧಿ: ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಸರ್ವ ಜನಾಂಗದ  ಅಭಿವೃದ್ಧಿ ಸಾಧ್ಯ ಎಂದು ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಅಂದ್ರಾಳ್ ಪ್ರದೇಶದಲ್ಲಿ ಮೇಯರ್ ತ್ರಿವೇಣಿ ಸೂರಿ ಮತ್ತು ಸ್ಥಳೀಯ ಕಾರ್ಪೊರೇಟರ್ ರಾಮಾಂಜಿನಿ ಮೊದಲಾದ ಮುಖಂಡರ ಜೊತೆ ಇಂದು ತೆರೆದ ವಾಹನದಲ್ಲಿ ರೋಡ್ ಶೋ‌ ನಡೆಸಿ ಜೊತೆಗೆ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.  ಕಾಂಗ್ರೆಸ್ ಪಕ್ಷವು  ಬಡವರ, ಮಹಿಳೆಯರ, ರೈತರ, ಕಾರ್ಮಿಕರ, ವೃತ್ತಿಪರರ ಎಲ್ಲ ಜಾತಿ ಧರ್ಮದ ಜನರ ಕಲ್ಯಾಣ ಮಾಡುವಂತಹ ಪಕ್ಷವಾಗಿದೆ.
ಸಾಮಾಜಿಕ ನ್ಯಾಯದ ತತ್ವದಡಿ ವಿಶ್ವಾಸವಿಟ್ಟಿರುವ  ಕಾಂಗ್ರೆಸ್ ಸೌಹಾರ್ದತೆಯಲ್ಲಿ ನಂಬಿಕೆ ಇಡುವ ಪಕ್ಷವಾಗಿದೆ. ಇಂದು ಇಂತಹ ಐತಿಹಾಸಿಕ ಪಕ್ಷ ನನಗೆ ಬಳ್ಳಾರಿ ನಗರದಿಂದ ಸ್ಪರ್ಧೆ ಮಾಡಿ ಗೆದ್ದು ಜನ ಸೇವೆ ಮಾಡಲು ಅವಕಾಶ ನೀಡಿದೆ.
ಅದಕ್ಕಾಗಿ ನಿಮ್ಮ ಆಶಿರ್ವಾದ ಬೇಕು ಈ ಯುವಕನಿಗೆ. ಮೇ 10ರಂದು  ಮತಗಟ್ಟೆಗಳಿಗೆ ತೆರಳಿ ಹಸ್ತದ ಗುರುತಿಗೆ ಮತನೀಡುವ ಮೂಲಕ ಶಾಸಕನನ್ನಾಗಿ ಮಾಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಿಂದ ಐದು  ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ, ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, ಬಿಪಿಎಲ್ ಚೀಟಿ ಇರುವ ಕುಟುಂಬದ ಪ್ರತಿ ಸದಸ್ಯನಿಗೆ10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಅಡಿ ಭತ್ಯೆ, ರಾಜ್ಯದ 25 ಸಾವಿರ ಪೌರ ಕಾರ್ಮಿಕರ ನೇಮಕಾತಿ ಹಾಗೂ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡುವ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಜಾರಿಗೆ ತರಲಿದೆ ಎಂದು  ಭರತ್ ರೆಡ್ಡಿ ಹೇಳಿದ್ದನ್ನು ಕೇಳಿ ಕರತಾಡನ‌ ಮಾಡಿ ನಮ್ಮ‌ಬೆಂಬಲ‌ನಿಮಗೆ ಎಂದು ಮತದಾರರು ಸೂಚಿಸಿದರು.
ಅವರ ಬೆಂಬಲಿಗರು ಪಕ್ಷದ ಕಾರ್ಯಕರ್ತರು ಇನ್ನಿತರ ಮುಖಂಡರು ಇದ್ದರು.