ಕಾಂಗ್ರೆಸ್ ನಿಂದ ಮಾತ್ರ ಜನರ ರಕ್ಷಣೆ ಸಾಧ್ಯ: ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ರಾಜ್ಯದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ  ನಮ್ಮ  ನಗರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಲು ಸಾಧ್ಯ. ಅದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಸ್ತದ ಗುರ್ತಿಗೆ ಮತ ನೀಡಿ ನನ್ನನ್ನು ವಿಧಾನಸಭೆಗೆ ಕಳುಹಿಸಿ ಎಂದು  ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದರು.
ಅವರು ಇಂದು  ನಗರದ 22ನೇ ವಾರ್ಡ್ ನ ವಿವಿಧ ಓಣಿಗಳಲ್ಲಿ ತೆರದ ವಾಹನದಲ್ಲಿ ತೆರಳಿ ಮತಯಾಚನೆ ಮಾಡುತ್ತ ಸ್ಥಳೀಯ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂಬರುವ ದಿನಗಳಲ್ಲಿ ನಿಮ್ಮ  ಆಸ್ತಿ, ಪ್ರಾಣಕ್ಕೆ ರಕ್ಷಣೆ ಇರಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಜನರ ಪ್ರಾಣಕ್ಕೂ ಜನರ ಆಸ್ತಿಗೂ ಯಾವ ಗ್ಯಾರಂಟಿ ಇಲ್ಲ. ಬಡವರ ಹೆಸರಿನಲ್ಲಿರುವ ಆಸ್ತಿ ಪರಭಾರೆ ಆಗಬಹುದು ಎಂಬ ಆರೋಪ ಮಾಡಿದರು.
ಈ ಹಿಂದೆ  2008 ರಲ್ಲಿ ಕಾನೂನು ಸುವ್ಯವಸ್ಥೆ ನಗರದಲ್ಲಿ ಹದಗೆಟ್ಟಿತ್ತು. ಜನರಿಗೆ ಪ್ರಾಣ ಭೀತಿ ಇತ್ತು, ಗಲಾಟೆಗಳಿದ್ದವು. ಆದರೆ ಈ ಚುನಾವಣೆಯಲ್ಲಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದರೆ ನಿಮಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದೆಂದರು.
ಬಿಜೆಪಿ ಮತ್ತು ಹೊಸ ಪಕ್ಷವನ್ನು ಮಹಿಳೆಯರು ಕಸ ಗುಡಿಸಿದಂತೆ ಗುಡಿಸಿ ಹಾಕಬೇಕೆಂದರು.
ಕಾಂಗ್ರೆಸ್ ಪಕ್ಷ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಕೊಟ್ಟ ಮಾತಿನಂತೆ ಜಾರಿಗೆ ತರಲಿದೆಂದ ಭರತ್,  ಮನೆಗಳಿಗೆ ಪಟ್ಟಾ ಇಲ್ಲ. ಶಾಸಕನಾಗಿ ಆಯ್ಕೆಯಾದ ನಂತರ ನಾನು ಮನೆಗೆ ಬಂದು ಪಟ್ಟಾ ಕೊಡುವೆ ಇದು ನನ್ನ ಭರವಸೆ. ದೇವರ ಸಾಕ್ಷಿಯಾಗಿ ಈ ಕೆಲಸ ಮಾಡುವೆ ಎಂದರು. ಕೆಲಸ ಮಾಡದಿದ್ದರೆ ನನ್ನ ಕೈ ಹಿಡಿದು ಕೇಳಿ ಎಂದರು.
 ಪಾಲಿಕೆ ಸದಸ್ಯ ಪೇರಂ ವಿವೇಕ್, ವಿ.ಎನ್.ಶ್ರೀನಾಥ, ನಾಗರಾಜ್, ಬಜ್ಜಪ್ಪ, ಮೋಹನ್, ಶೇಖರ್ ಮೊದಲಾದವರು ಇದ್ದರು.