ಕಾಂಗ್ರೆಸ್ ನಿಂದ ನಾಳೆ ಕರ್ನಾಟಕ ಬಂದ್ ; ಬೆಂಬಲಿಸಲು ಕರೆ

ದಾವಣಗೆರೆ. ಮಾ.೮; ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಾಳೆ ಬೆಳಗ್ಗೆ  ೯ ರಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಸಾರ್ವಜನಿಕರು ಬೆಂಬಲ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ನಾಳೆ ಬೆಳಗ್ಗೆ ೮ ಗಂಟೆಯಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕಿದೆ.ಕರ್ನಾಟಕಕ್ಕೆ ಕರಪ್ಷನ್ ಕ್ಯಾಪಿಟಲ್ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ದ ನಾಳೆ ಬೆಳಗ್ಗೆ ೯ ರಿಂದ ೧೧ ಗಂಟೆಯವರೆಗೆ ಸಾಂಕೇತಿಕವಾಗಿ ಕರ್ನಾಟಕ ಬಂದ್ ನಡೆಯಲಿದೆ. ವರ್ತಕರು,ಸಾರ್ವಜನಿಕರು ಬಂದ್ ಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈಗಾಗಲೇ ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆಗಳು‌  ಪ್ರಾರಂಭವಾಗಿರುವುದರಿಂದ ಯಾವುದೇ ತೊದರೆಗಳಾಗದಂತೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆ ಆಗದಂತೆ ಬಂದ್ ಮಾಡಲಾಗುವುದು ಎಂದರು.ಬಿಜೆಪಿ ಮಾಡುತ್ತಿರುವುದು ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ಆಗಿದ್ದು, ಶೇ.40% ಭ್ರಷ್ಟಾಚಾರದಿಂದಾಗಿ ಶೋಷಣೆ, ಹಿಂಸೆ, ಬೆಲೆ ಏರಿಕೆಯಿಂದ ಜನರ ಬದುಕು ಸರ್ವನಾಶವಾಗಿದೆ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆ ದ್ರೋಹ ಮಾಡುವುದನ್ನು ಬಿಟ್ಟು ಏನನ್ನು ಮಾಡಿಲ್ಲ ಎಂದು ದೂರಿದರು.ಗುತ್ತಿಗೆದಾರದಿಂದ ಶೇಕಡ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣ ಬಲವಾದ ಸಾಕ್ಷವಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಬಿಜೆಪಿ ಸರ್ಕಾರವು ಪ್ರತಿಯೊಂದು ಕಾಮಗಾರಿಗೂ ಕಮಿಷನ್ ಪಡೆಯುತ್ತಿದ್ದು, ಗುತ್ತಿಗೆದಾರರು ಬಲಿಯಾಗಿದ್ದಾರೆ. ಇನ್ನೆಷ್ಟು ಜನ ಬಲಿ ಆಗಬೇಕು. ಸಮಾಧಿ ಮೇಲೆ ಅಧಿಕಾರ ನಡೆಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕಿದ್ದು, ಸಾರ್ವಜನಿಕರು ಬಂದ್‌ಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ದಿನೇಶ್ ಕೆ ಶೆಟ್ಡಿ,ಎ.ನಾಗರಾಜ್,ಅನಿತಾಬಾಯಿ ಮಾಲತೇಶ್,ಸುಷ್ಮಾಪಾಟೀಲ್,ಆಯೂಬ್ ಪೈಲ್ವಾನ್,ಮಲ್ಲಿಕಾರ್ಜುನ್,ಪ್ರಕಾಶ್ ಪಾಟೀಲ್,ಮೈನುದ್ದೀನ್,ಮಹಮ್ಮದ್ ಜಿಕ್ರಿಯಾ,ಕೆ.ಜಿ ಶಿವಕುಮಾರ್ ಉಪಸ್ಥಿತರಿದ್ದರು.