ಕಾಂಗ್ರೆಸ್ ನಾಯಕರ ವಿರುದ್ಧ ಹಳ್ಳಿಹಕ್ಕಿ ವಾಗ್ದಾಳಿ

ಮೈಸೂರು,ನ.18:- ಬಿಟ್ ಕಾಯಿನ್ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಏನು ಇಲ್ಲದಿದ್ದರೂ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್,ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ಆರ್ಥಿಕ ಮಂತ್ರಿಯಾಗಿದ್ದವರು. ರೀಡೋ ಅಂದ್ರೆ ಏನು. ರೀಡೋ ಮಾಡಿದವರಿಗೆ ಬಿಟ್ ಕಾಯಿನ್ ಬಗ್ಗೆ ಏನು ಅಂತ ಗೊತ್ತಿದ್ದರೆ ಹೇಳಿ. 15 ದಿವಸ ನಂತರ ಸಾಕ್ಷಿ ಕೊಡುತ್ತೇನೆ ಅಂತ ಕುಮಾರಸ್ವಾಮಿ ಹೇಳ್ತಾರೆ. ದೊಡ್ಡ ನಾಯಕರು ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದಾರೆ. ಅನವಶ್ಯಕವಾಗಿ ಮುಖ್ಯಮಂತ್ರಿಗಳನ್ನು ಎಳೆಯುತ್ತಿದ್ದಾರೆ. ಅವರು ಬಹಳ ಸಮಾಧಾನದಿಂದ ರಾಜ್ಯವನ್ನು ಕೊಂಡೊಯ್ಯತ್ತಿದ್ದಾರೆ. ಬೆಕ್ಕು ಹೋಯ್ತು, ಇಲಿ ಹೋಯ್ತು ಅಂತ ಹೇಳುವುದಲ್ಲ. ಇದರ ಬಗ್ಗೆ ನಿಮಗೆ ಗೊತ್ತಿದ್ದರೆ ಸ್ಪಷ್ಟವಾಗಿ ಹೇಳಿ. ಅನಾವಶ್ಯಕವಾಗಿ ಗೊಂದಲ ಎಬ್ಬಿಸಬೇಡಿ ಎಂದು ಕಿಡಿಕಾರಿದರು.
ಬಿಟ್ ಕಾಯಿನ್ ಬಗ್ಗೆ ಸಾಕ್ಷಿ ಆಧಾರ ಇಲ್ಲ. ಬಿಟ್ ಕಾಯಿನ್ ಅಂದ್ರೆ ಏನೂ ಅಂತಾ ಯಾರೂ ಹೇಳ್ತಾ ಇಲ್ಲ. ಕೇವಲ ಎರಡು ಸಾಕ್ಷಿ ಕೊಡಿ. ತನಿಖೆಗೆ ನಾನೇ ಒತ್ತಾಯ ಮಾಡುತ್ತೇನೆ ಎಂದರು. ಹದಿನೈದು ದಿನ ಕಾಯಿರಿ ನಾನು ಸಾಕ್ಷಿ ತರುತ್ತೇನೆ ಎಂದು ಕುಮಾರಸ್ವಾಮಿ ಹೇಳ್ತಾರೆ. ಎಲ್ಲಿಂದ ತರ್ತಾರೆ ಸಾಕ್ಷಿನಾ ಕುಮಾರಸ್ವಾಮಿ ಸ್ವಾಮಿ. ಬಿಟ್ ಕಾಯಿನ್ ಪ್ರಕರಣ ಯಾರಿಗೂ ಗೊತ್ತಿಲ್ಲದೆ ಮಾಯಾವಿ ತರ ಹೋಗುತ್ತಿದೆ. 2016 ರಲ್ಲಿ ಯುಬಿ ಸಿಟಿಯಲ್ಲಿ ಬಿಟ್ ಕಾಯಿನ್ ವಿಚಾರದ ಬಗ್ಗೆ ಗಲಾಟೆ ಆಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದನೂ ಇದೆ. ಡಿ ಲಿಮಿಟೇಷನ್ ವಿಚಾರಲ್ಲಿ ಹೊಸ ಭಾಷ್ಯ ಬರೆದವರು. ಸಿದ್ದರಾಮಯ್ಯನವರೇ ಹಿಟ್ ಅಂಡ್ ರನ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವ್ರೆ ಸಾಕ್ಷಿ ಕೊಡಿ ನಾನೇ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ. ಯೂತ್ ಕಾಂಗ್ರೆಸ್ ನಲ್ಲಿ ನಲಪಾಡ್ ಗೆದ್ದರೂ ಅಧ್ಯಕ್ಷ ಆಗಲು ಅವಕಾಶ ಕೊಡಲಿಲ್ಲ. ಯಾಕೆ ಕೊಡಲಿಲ್ಲ ಆಪಾದನೆ ಇದೆ ಅಂತ. ಹಾಗಿದ್ದರೆ ನಲಪಾಡ್ ಮೇಲಿರೋ ಆಪಾದನೆ ಏನೂ ಹೇಳಿ ಎಂದು ಪ್ರಶ್ನಿಸಿದರು.
ಪೇಜಾವರ ಶ್ರೀ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ ಹಂಸಲೇಖ ಶ್ರೀಗಳ ಬಗ್ಗೆ ಯಾವ ರೀತಿ ಹೇಳಿದರೋ ನಮಗೂ ಅರ್ಥ ಆಗ್ತಿಲ್ಲ. ಹಂಸಲೇಖ ಕೂಡ ಕ್ಷಮೆ ಕೋರಿದ್ದಾರೆ. ಪೇಜಾವರ ಶ್ರೀಗಳ ಜೊತೆ ನನಗೆ ತುಂಬಾ ಆತ್ಮೀಯತೆ ಇತ್ತು. ಶ್ರೀಗಳ ಬಗ್ಗೆ ಅಪಾರ ಗೌರವ ಇದೆ. ಶ್ರೀಗಳ ಬಗ್ಗೆ ಆಹಾರದ ಬಗ್ಗೆ ಮಾತನಾಡಿದ್ದಾರೆ. ಆಹಾರ, ಬಟ್ಟೆ, ದೇವರ ಆರಾಧನೆಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಶ್ರೀಗಳು ಭಿಕ್ಷಾನ್ನದಲ್ಲಿಯೂ ಶಿಷ್ಟಾಚಾರ ಮಾಡಿದವರು ಎಂದು ಹಂಸಲೇಖ ಹೇಳಿಕೆಯನ್ನು ಖಂಡಿಸಿದರು.
ಈಗ ಕೆಲವರು ಹುಸಿ ಚಿಂತಕರು ಹುಟ್ಟಿಕೊಂಡಿದ್ದಾರೆ. ಶ್ರೀಗಳು ಬದುಕಿದ್ದರೆ ಏನೋ ಹೇಳುತ್ತಿದ್ದರು. ಆದರೆ ಶ್ರೀಗಳು ಸತ್ತ ಬಳಿಕ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಪ್ರಕರಣಕ್ಕೆ ಸದ್ಯಕ್ಕೆ ಇತಿಶ್ರೀ ಹಾಡಬೇಕು. ಮತ್ತೆ ಮತ್ತೆ ಕಲುಷಿತ ಮಾಡಬೇಡಿ. ಈ ಪ್ರಕರಣವನ್ನು ಇಲ್ಲಿಗೆ ಬಿಡಿ ಎಂದು ಕೈ ಮುಗಿದು ಮನವಿ ಮಾಡಿದರು.
ವಿಧಾನ ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ನಲ್ಲಿ ವಿಧಾನ ಪರಿಷತ್ ಟಿಕೇಟ್ ಪಡೆಯಲು 15 ಕೋಟಿ ಬೇಕು ಎಂದು ಹೊಸ ಬಾಂಬ್ ಸಿಡಿಸಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೇಟ್ ಬಯಸುವವರಿಗೆ ಈ ಮಾತು ಹೇಳಿದ್ದಾರೆ. ಟಿಕೇಟ್ ಬೇಕಾದರೆ ಒಂದು ಲಕ್ಷ ನಾನ್ ರಿಟನಬಲ್ ಫಂಡ್ ಕೊಡಬೇಕು. 15 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದವರಿಗೆ ಟಿಕೇಟ್ ಎಂದಿದ್ದಾರೆ. ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತೆ ಹೇಳಿ. ಕಾಂಗ್ರೆಸ್ ನಲ್ಲೂ ಕೂಡ ಈಗ ಸಾಮಾಜಿಕ ನ್ಯಾಯ ದೂರಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇನ್ನೂ ಬಿಜೆಪಿಗೆ ಸೇರಿಲ್ಲ ಅವ್ರಿಗೆ ಯಾಕೆ ಟಿಕೇಟ್. ಸಂದೇಶ್ ನಾಗರಾಜ್ ಗೂ ಬಿಜೆಪಿ ಗೂ ಏನು ಸಂಬಂಧ? ಪಕ್ಷಕ್ಕೆ ಸೇರದವರಿಗೆ ಚುನಾವಣೆ ಟಿಕೆಟ್ ಕೊಡಲು ಹೇಗೆ ಸಾಧ್ಯ. ಕಡೇ ಗಳಿಗೆಯಲ್ಲಿ ಬಿಜೆಪಿ ಸೇರಿದರೆ ಟಿಕೆಟ್ ನೀಡುವುದು ಸರಿಯಲ್ಲ. 75 ವರ್ಷ ದಾಟಿದವರಿಗೆ ಬಿಜೆಪಿ ಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ನಿಯಮವಿದೆ. ಹಾಗಾಗಿ ಸಂದೇಶ್ ನಾಗರಾಜ್ ಬಿಜೆಪಿ ಸೇರಿ ಕೆಲಸ ಮಾಡಲಿ. ಪಕ್ಷಕ್ಕೆ ದುಡಿಯುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದರು.