
ದಾವಣಗೆರೆ.ಜು.೧೯: ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಚುನಾವಣೆಗೆ ಇನ್ನು ಎಂಟು ತಿಂಗಳಿದೆ, ನೋಡೋಣ. ಚುನಾವಣೆ ಸಮೀಪಿಸಲಿ, ಆಗ ಹೇಳುತ್ತೇನೆ ಎಂದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ನೂ ಟೈಂ ಇದೆ. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲಾವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಮತ್ತೆ ಆಗಬೇಕು ಎಂಬ ಬಗ್ಗೆಯಷ್ಟೇ ನಮ್ಮ ಯೋಚನೆ. ಬಸವರಾಜ್ ಬೊಮ್ಮಾಯಿ ಅವರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ. ಇದಕ್ಕೆ ತಲೆಕಡಿಸಿಕೊಳ್ಳಲ್ಲ. ನಮ್ಮ ಪಕ್ಷದಿಂದ ಸೂಕ್ತ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎಂದರು.ಇನ್ನು ಪ್ರಭಾ ಮಲ್ಲಿಕಾರ್ಜುನ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ನಮ್ಮ ಮುಂದಿಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿ. ಮನೆಯಲ್ಲಿದ್ದವರೂ ಹೊರಬರುವಂತೆ ನೀವು ಮಾಡುತ್ತೀರಾ. ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಮನೆಯವರೆಲ್ಲಾ ಓಡಾಡಿದೆವು. ಅವರೂ ಪ್ರಚಾರಕ್ಕೆ ಬಂದರು. ಆರೋಗ್ಯ ಶಿಬಿರಗಳನ್ನು ಹೆಚ್ಚು ನಡೆಸುತ್ತಿದ್ದಾರೆ. ಪ್ರಭಾ ವೈದ್ಯರಾದ ಕಾರಣ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಎಸ್. ಎಸ್. ಹೆಲ್ತ್ ಕೇರ್ ಸೆಂಟರ್ ನಡಿ ಡಯಾಲಿಸಿಸ್, ಹೃದಯ ತಪಾಸಣೆ ಸೇರಿದಂತೆ ಆರೋಗ್ಯ ಕುರಿತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರ್ನಾಲ್ಕು ಕಡೆಗಳಲ್ಲಿ ಸ್ಪರ್ಧಿಸಲಿ ಎಂಬ ಆಹ್ವಾನ ನೀಡಿದ್ದಾರೆ. ಹರಿಹರ ಶಾಸಕ ಎಸ್. ರಾಮಪ್ಪ ಅವರೂ ಸಹ ಸಿದ್ದರಾಮಯ್ಯ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಹರಿಹರದಲ್ಲಿ ಸ್ಪರ್ಧಿಸಿದರೆ ಗೆಲುವಿಗೆ ಶಕ್ತಿಮೀರಿ ಶ್ರಮಿಸುತ್ತೇವೆ ಎಂದು ಹೇಳಿದರು.ನಾನು ಹೊರಗೆ ಬರುತ್ತಿಲ್ಲ ಎಂಬುದು ಮಾಧ್ಯಮದ ಸೃಷ್ಟಿ. ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಆಗುತ್ತಿದೆ. ನಾವು ಒಂದು ಫೋನ್ ಮಾಡಿದರೆ ಕೆಲಸ ಆಗುತ್ತದೆ. ಅವರದ್ದು ಎರಡು “ಚಪ್ಪಲಿ” ಸವೆದರೂ ಕೆಲಸ ಆಗಲ್ಲ. ಶೇಕಡಾ 40 ಪರ್ಸಂಟೇಸ್ ಕೊಟ್ಟರೆ ಕೆಲಸ ಆಗುತ್ತದೆ ಎಂದು ಹೇಳಿದರು.ರಾಜ್ಯದ ಪ್ರತಿ ಮೂಲೆ ಮೂಲೆಯಿಂದಲೂ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಜನರು ಬರುತ್ತಾರೆ. ಎಲ್ಲರ ಸಹಕಾರ ಕೋರುತ್ತಿದ್ದೇವೆ. ನಾವಂತೂ ಕನಿಷ್ಠ 5 ಲಕ್ಷ ಜನರು ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಹತ್ತು ಲಕ್ಷಕ್ಕೂ ಹೆಚ್ಚಿನ ಜನರು ಬಂದರೆ ಆಶ್ಚರ್ಯವೇನಿಲ್ಲ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಅಮೃತ ಮಹೋತ್ಸವಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರೋಧ ಮಾಡಿಲ್ಲ. ಎಲ್ಲರೂ ಸೇರಿ ಮಾಡೋಣ ಎಂದು ಶಿವಕುಮಾರ್ ಅವರೇ ಹೇಳಿದ್ದಾರೆ. ಯಾರೂ ವ್ಯಕ್ತಿ ಪೂಜೆ ಮಾಡಲ್ಲ. ಪಕ್ಷ ಪೂಜೆಯೇ ಮಾಡೋದು. ಡಿ. ಕೆ. ಶಿವಕುಮಾರೋತ್ಸವವು ಈ ಮಹೋತ್ಸವ ಮುಗಿದ ಬಳಿಕ ನೋಡೋಣ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂತ್ರಿ ಮಂಡಲದಲ್ಲಿದ್ದವರು ಹಾಗೂ ಸ್ನೇಹಿತರು ಸೇರಿದಂತೆ ಎಲ್ಲರ ಒಕ್ಕೊರಲ ನಿರ್ಧಾರದಂತೆ ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಮಧ್ಯಕರ್ನಾಟಕದ ಹೆಬ್ಬಾಗಿಲು ಆಗಿದೆ. ಬರಲು ಹೋಗಲು ಎಲ್ಲರಿಗೂ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಇಲ್ಲಿ ಆಯೋಜಿಸಿದ್ದೇವೆ. ಸಿದ್ದರಾಮಯ್ಯ ಅವರು ಜನುಮದಿನ ಆಚರಿಸಿಕೊಳ್ಳಲು ಒಪ್ಪುತ್ತಿರಲಿಲ್ಲ. ನಾವೆಲ್ಲರೂ ಸೇರಿ ಒಪ್ಪಿಸಿದ್ದೇವೆ. ಸಿದ್ದರಾಮಯ್ಯರ ಶಕ್ತಿ ಪ್ರದರ್ಶನ ಅಲ್ಲ. ಈಗಿನ ಸರ್ಕಾರದ ಆಡಳಿತದ ವೈಖರಿಯನ್ನು ಜನರೇ ನೋಡುತ್ತಿದ್ದಾರೆ. ಜನರಿಗೆ ಸ್ಪಂದಿಸುವ, ಉತ್ತಮ, ಬಿಗಿ ಆಡಳಿತ ನೀಡಬೇಕೆಂಬ ಅಪೇಕ್ಷೆ ನಮ್ಮದು. ಹಾಗಾಗಿ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
Attachments area