ಕಾಂಗ್ರೆಸ್ ನಲ್ಲಿನ ಭಿನ್ನಮತ ಪಾಲಿಕೆ ಮೇಯರ್ ಉಪ ಚುನಾವಣೆ ಮುಂದೂಡಿಕೆ


ಎನ್.ವೀರಭದ್ರಗೌಡ
* ಕಾಂಗ್ರೆಸ್ ನಲ್ಲಿ ಎರೆಡು ಗುಂಪು
* ಮಿಂಚು ಬೆಂಬಲಿಗರು
* ಕಾಂಗ್ರೆಸ್ ಅಭ್ಯರ್ಥಿಗಳ  ಬೆಂಬಲಿಗರು.
* ಕಾಂಗ್ರೆಸ್  ಭಿನ್ನಮತದ ಲಾಭ ಪಡೆಯಲು ಬಿಜೆಪಿ ಯತ್ನ
* ಮುಂದೂಡಿಕೆ ಪ್ರಶ್ನಿಸಿದ ಬಿಜೆಪಿ ಸದಸ್ಯರು. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
* ಎಡಿಸಿ ಮಹಮ್ಮದ್ ಜುಬೇರರಿಂದ  ಮುಂದೂಡಿಕೆ ಪ್ರಕಟ.
* ಬಾರದ ಪ್ರಾದೇಶಿಕ ಆಯುಕ್ತರು
* ಪಾಲಿಕೆ ಆವರಣದಲ್ಲಿ ಶಾಸಕರ, ಸಚಿವ ಬೆಂಬಲಿಗ ಸದಸ್ಯರ ಮಧ್ಯೆ ಹೈ ಡ್ರಾಮ
* ಮಿಂಚು ಶ್ರೀನಿವಾಸ್ ಬೆಂಬಲಿಸಲು ಸನ್ನದ್ದವಾಗಿದ್ದ ಬಿಜೆಪಿ.
* ಚುನಾವಣೆ ಮುಂಡೂಡಿಸಲು ಯಶಸ್ವಿಯಾದ ಉಸ್ತುವಾರಿ
ಬಳ್ಳಾರಿ, ನ.28: ಇಂದು ನಡೆಯಬೇಕಿದ್ದ ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಸ್ಥಾನದ ಉಪ ಚುನಾವಣೆ ಅನಿವಾರ್ಯ ಕಾರಣದಿಂದ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ  ಮುಂದೂಡಲಾಗಿದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಅವರು ಪ್ರಕಟಿಸಿದ್ದಾರೆ.
ಅವರು ಇಂದು ಬೆಳಿಗ್ಗೆ 9 ರಿಂದ 10.30 ರ ವರೆಗೆ ನಾಮಪತ್ರ ತೆಗೆದುಕೊಂಡರು. ಆಯ್ಕೆ ಬಯಸಿ ಕಾಂಗ್ರೆಸ್ ನಿಂದ 38 ನೇ ವಾರ್ಡಿನ ಸದಸ್ಯ ವಿ.ಕುಬೇರ ಮತ್ತು 31 ನೇ ವಾರ್ಡಿನ  ಶ್ವೇತ,  ಬಿಜೆಪಿ ಒಂದನೇ ವಾರ್ಡಿನ‌ ಸದಸ್ಯ ಹನುಮಂತ ಗುಡಿಗಂಟಿ ಮತ್ತು  ಮತ್ತು 35 ನೇ ವಾರ್ಡಿನ  ಪಕ್ಷೇತರ ಕಾರ್ಪೋರೇಟರ್ ಆಗಿ ಗೆದ್ದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ವಿ. ಶ್ರೀನಿವಾಸಲು (ಮಿಂಚು)ನಾಮಪತ್ರ ಸಲ್ಲಿಸಿದ್ದರು.
ಪಾಲಿಕೆಯಲ್ಲಿ 39 ಕಾರ್ಪೋಟರ್ ಗಳು ಐವರು ಶಾಸಕರು, ಸಂಸದರು ಸೇರಿ 44 ಜನ ಮತದಾನದ ಹಕ್ಕು ಪಡೆದಿದ್ದಾರೆ. ಇಂದು ಪಾಲಿಕೆಯತ್ತ ಶಾಸಕರು ಸಂಸದರು, ಕೆಲ ಸದಸ್ಯರು ಬಂದಿರಲಿಲ್ಲ. 39 ಸದಸ್ಯರ ಪೈಕಿ 21 ಜನ  ಕಾಂಗ್ರೆಸ್, 13ಜನ ಬಿಜೆಪಿ ಮತ್ತು 5 ಪಕ್ಷೇತರ ಸದಸ್ಯರಿದ್ದಾರೆ.
ಭಿನ್ನಮತ:
ಬಲ್ಲ ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವವ ಬಿ.ನಾಗೇಂದ್ರ ಅವರು ಕಾಂಗ್ರೆಸ್  ಪಕ್ಷದ ಮುಖಂಡ  ಸೋಮು ಅವರ ಪತ್ನಿ ಶ್ವೇತ ಅವರನ್ನು ಆಯ್ಕೆ ಮಾಡಲು ತಮ್ಮ ಬೆಂಬಲದ ಸದಸ್ಯರಿಗೆ ಸೂಚಿಸಿದ್ದರೆಂದು ತಿಳಿದುಬಂದಿದೆ.
ಆದರೆ ಈ ಮಧ್ಯೆ ನಗರ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗ ಸದಸ್ಯ ಮಿಂಚು ಶ್ರೀನಿವಾಸುಲು ಹತ್ತಕ್ಕೂ ಹೆಚ್ಚು  ಸದಸ್ಯರ ಬೆಂಬಲದೊಂದಿಗೆ ನಾಮಪರ್ರ ಸಲ್ಲಿಸಿದರು. ಈ ಮಧ್ಯೆ ಅವರ ಸಹೋದರ ವಿ.ಕುಬೇರ ಅವರು ಸಹ ನಾಮಪತ್ರ ಸಲ್ಲಿಸಿದಾಗ. ಸದಸ್ಯರಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಸ್ಪಷ್ಟ ಸಂದೇಶ ಮುಖಂಡರು, ಪಕ್ಷದಿಂ ದ  ಬಾರದ ಕಾರಣ ಗೊಂದಲಕ್ಕೆ ಕಾರಣರಾದರು. ಒಮ್ಮೆ ಆ ಗುಂಪು , ಮತ್ತೊಮ್ಮೆ ಈ ಗುಂಪಿನ ಕಡೆ ನಡೆದಾಡುತ್ತಿದ್ದರು. ಪಾಲಿಕೆ ಆವರಣ ಭಿನ್ನ ಮತದ ಬಾಣಲೆಯಂತೆ ಕಂಡಿತು.
ವಿಳಂಬ:
ಚುನಾವಣೆಗೆ ಸಭೆ ನಡೆಸಲು ಮದ್ಯಾಹ್ನ 12.30 ಎಂದು ಸಮಯ ನಿಗಧಿ‌ಪಡಿಸಿ ಪಾಲಿಕೆ ಸದಸ್ಯರಿಗೆ ತಿಳಿಸಿತ್ತಂತೆ. ಅದರಂತೆ ಬಿಜೆಪಿ ಸದಸ್ಯರು ಮತ್ತು ಮಿಂಚು ಶ್ರೀನಿವಾಸ ವಾಸ್ ಅವರನ್ನು  ಬೆಂಬಲುಸುವ ಸದಸ್ಯರು ಸಭಾಂಗಣದಲ್ಲಿ ಬಂದು ಕುಳಿತಿದ್ದರು. ಆದರೆ ಒಂದುವರೆ ಗಂಟೆಯಾದರೂ  ಚುನಾವಣೆ ನಡೆಸಬೇಕಾದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಬಾರದ ಕಾರಣ, ಸಭೆಯಿಂದ ಹೊರಬಂದ ಬಿಜೆಪಿ ಸದಸ್ಯರಾದ ಕೆ.ಹನುಮಂತಪ್ಪ, ಪ್ರತಿ ಪಕ್ಷದ ನಾಯಕ ಇಬ್ರಾಹಿಂ ಬಾಬು ಅವರು ಸಭೆಯ ವಿಳಂಬದ ಬಗ್ಗೆ ಆಕ್ಷೇಪ ಎತ್ತಿ ಗಲಾಟೆ ಮಾಡಿದರು. ಆದರೂ ಎರೆಡು ಗಂಟೆ ಆದರೂ ಸಭೆ ಆರಂಭಗೊಳ್ಳಲಿಲ್ಲ.
ಪ್ರಕಟ:
ಮಧ್ಯಾಹ್ನ 2 ಗಂಟೆ ಹೊತ್ತಿಗೆ ಎಡಿಸಿ ಅವರು ಮಾಧ್ಯಮಗಳ ಜೊತೆ ಮಾತನಾಡಿ. ಅನಿವಾರ್ಯ ಕಾರಣದಿಂದ ಚುನಾವಣೆ ಮುಂದೂಡಿದೆ ಎಂದು ಪ್ರಕಟಿಸಿದರು.
 ಊಟ ಮಾಡಿದರು:
ಚುನಾವಣೆಗೆ ಬಂದಿದ್ದ ಬಿಜೆಪಿ ಮತ್ತು ಮಿಂಚು ಬೆಂಬಲಿಗ ಸದಸ್ಯರು ಚುನಾವಣೆಯನ್ನು ಮುಂದೂಡಲು ಕಾರಣ ಏನು ತಿಳಿಸಬೇಕು ಎಂದು ಪಟ್ಟು ಹಿಡಿದು ಸಭಾಂಗಣದಲ್ಲಿಯೇ ಕುಳಿತರು. ಹಸಿವಾದ್ದರಿಂದ ಅವರಿಗೆ ಊಟದ ವ್ಯವಸ್ಥೆ ಮಾಡಿತ್ತು.
ಭಿನ್ನಮತ ಸ್ಪೋಟ:
ಒಟ್ಟಾರೆ ಇಂದಿನ ಪಾಲಿಕೆಯ ಮೇಯರ್ ಚುನಾವಣೆಯ ಬೆಳವಣಿಗೆ ಈ ಹಿಂದಿನಿಂದಲೂ ಜಿಲ್ಲೆಯ ಕಾಂಗ್ರೆಸ್ ನಲ್ಲಿನ ಎಡ ಬಿಡದೇ ಕಾಡುತ್ತಿದ್ದ ಭಿನ್ನಮತ ಇಂದು ಮತ್ತೆ ಪ್ರವರ್ಧ ಮಾನಕ್ಕೆ ಬಂದಂತೆ ಆಗಿದೆ.
ಈ ಹಿಂದೆ ಸಹ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಒಂದೇ ಎಂಬಂತಿದ್ದರೂ, ನಗರದಲ್ಲಿ ಭಿನ್ನಮತದ ಹೊಗೆ ಇದ್ದೇ ಇರುತ್ತಿತ್ತು.ಆದರೆ ಕಳೆದ ಚುನಾವಣೆಯಲ್ಲಿ ಅದೆಲ್ಲಾ ಮರೆತು ಒಂದಾಗಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ಬೀಗುತ್ತಿದ್ದ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತದ ಹೊಗೆ ಹೊತ್ತಿಕೊಂಡಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ನಿರಾಶೆ:
ಕಾಂಗ್ರೆಸ್ ಭಿನ್ನಮತದ ಲಾಭ ಪಡೆಯಲು ಇಂದು ಸರ್ವ ರೀತಿಯ ಪ್ರಯತ್ನ ಮಾಡಿದಂತೆ ಇತ್ತು. ಮತದಾನ ಪ್ರಕ್ರಿಯೆ ನಡೆದಿದ್ದರೆ. ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಳಿಸಲು ಮಿಂಚು ಅವರನ್ನು ಬೆಂಬಲಿಸಲು ಆಂತರಿಕ  ವ್ಯವಸ್ಥೆ ಮಾಡಿಕೊಂಡಂತೆ ಕಂಡು ಬಂತು. ಆದರೆ ಚುನಾವಣೆ ನಡೆಯದೆ. ಕಾಂಗ್ರೆಸ್ ನ ಭಿನ್ನಮತದ  ಬೆಂಕಿಗೆ ತುಪ್ಪ ಸುರಿಯಲು ಮುಂದಾಗಿದ್ದ ಬಿಜೆಪಿಗೆ ನಿರಾಶೆಯಾದಂತೆ ಕಂಡುಬಂತು.
 ಕೈಗೊಂಬೆಯಾದ ಅಧಿಕಾರಿಗಳು:
ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಾಗಿ ಈ ಚುನಾವಣೆ ಮುಂದೂಡಿದ್ದಾರೆಂದು ಪಾಲಿಕೆಯ ಬಿಜೆಪಿಯ ಸದಸ್ಯರಾದ ಇಬ್ರಾಹಿಂ, ಗೋವಿಂದರಾಜುಲು, ಸುರೇಖ ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್ ಮೊದಲಾದವರು ಆರೋಪಿಸಿದರು.
ಪ್ರಾದೇಶಿಕ ಆಯುಕ್ತರು ಬಳ್ಳಾರಿಯಲ್ಲೇ ಇದ್ದು. ಬರದೆ ಚುನಾವಣೆ ಮುಂದೂಡಿದ್ದಾರೆಂದರು. ನಾವು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಈ ಚುನಾವಣೆ ಮುಂದೂಡುವ ನಾಟಕ ನಡೆದಿದೆ ಎಂದರು.
ನಮಗೆ ಸ್ಪಷ್ಟ ಉತ್ತರ ಬರುವ ವರೆಗೂ ಸಭಾಂಗಣದಲ್ಲಿ ಇರುತ್ತೇವೆ ಎಂದರು.