ಕಾಂಗ್ರೆಸ್ ನಕಾರಾತ್ಮಕ ರಾಜಕಾರಣ: ಬೊಮ್ಮಾಯಿ

ಬೆಂಗಳೂರು,ಜೂ.೧೧- ಕೋವಿಡ್‌ನ ಈ ಸಂದರ್ಭದಲ್ಲಿ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿರುವುದು ಕೋವಿಡ್‌ನ ನಿಯಮಾವಳಿಗಳನ್ನು ಉಲ್ಲಂಘಿಸುವ ಕಾಂಗ್ರೆಸ್ ಪಕ್ಷದ ನಕಾರಾತ್ಮಕ ರಾಜಕಾರಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ದೂರಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಎಲ್ಲವನ್ನೂ ಉಲ್ಲಂಘನೆ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಏಕೆ ಹಾಕಿಸಿಕೊಳ್ಳಬೇಕು, ಮೊದಲು ಪ್ರಧಾನಿ ನರೇಂದ್ರಮೋದಿ ಅವರು ಲಸಿಕೆ ಹಾಕಿಸಿಕೊಳ್ಳಿ ಎಂದರು. ಈಗ ಲಸಿಕೆ ಯಾಕೆ ಕೊಟ್ಟಿಲ್ಲ ಎಂದು ಕೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಕೋವಿಡ್‌ನ ಸಂದರ್ಭದಲ್ಲೂ ಮನೆಯಿಂದ ಹೊರ ಬಂದು ಬೆಲೆ ಏರಿಕೆ ವಿಚಾರದಲ್ಲಿ ಹೋರಾಟ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಕೋವಿಡ್‌ನ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ನಕರಾತ್ಮಕ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ತಪಾಸಣೆಗೆ ಚಿಂತನೆ
ಬೆಂಗಳೂರು ಅನ್‌ಲಾಕ್ ಆದ ಮೇಲೆ ವಾಪಸ್ಸಾಗುವವರಿಗೆ ಕೊರೊನಾ ರ್‍ಯಾಪಿಡ್ ಪರೀಕ್ಷೆಗಳನ್ನು ನಡೆಸುವ ಚಿಂತನೆ ನಡೆದಿದೆ. ಹೆಚ್ಚು ಜನ ಸೇರುವ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಬೆಂಗಳೂರಿಗೆ ಬರುವವರ ಕೊರೊನಾ ಪರೀಕ್ಷೆ ನಡೆಸುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ ಎಂದರು.
ಲಾಕ್‌ಡೌನ್ ಜೂ. ೧೪ರವರೆಗೂ ಇದೆ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು, ಅನ್‌ಲಾಕ್ ಆಗುವುದು ಜೂ. ೧೪ರ ನಂತರ. ಹಾಗಾಗಿ ೩-೪ ದಿನ ಮನೆಯಲ್ಲೇ ಇದ್ದು ಸಹಕರಿಸುವಂತೆ ಮನವಿ ಮಾಡಿದ ಅವರು, ಜನ ಇಂದಿನಿಂದಲೇ ಅನ್‌ಲಾಕ್ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ. ಅನಗತ್ಯವಾಗಿ ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದರು.