ಕಾಂಗ್ರೆಸ್ ದುರಾಸೆಗೆ ಎಸ್ಸಿ/ಎಸ್ಟಿ ಜನರ ಅಭಿವೃದ್ಧಿ ಬಲಿ:ಕೇಂದ್ರ ಸಚಿವ ಖೂಬಾ

ಬೀದರ್: ಆ.3:ಕಾಂಗ್ರೆಸ್ ಪಕ್ಷವು ತನ್ನ ದುರಾಸೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಬಲಿ ಕೊಡುತ್ತಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.

ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ಮೀಸಲಾದ ?11 ಸಾವಿರ ಕೋಟಿ ಅನುದಾನ ಬಳಸಿಕೊಳ್ಳುತ್ತಿರುವುದು ಖಂಡನಾರ್ಹ.

ಇದು ರಾಜ್ಯದ ಬಡವರು, ದಲಿತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ರಾಜಕೀಯ ಲಾಭಕ್ಕಾಗಿ ಹಾಲು, ಆಸ್ತಿ ನೋಂದಣಿ ಮತ್ತು ಇತರೆ ಹಲವು ತೆರಿಗೆಗಳನ್ನು ಸಿದ್ದರಾಮಯ್ಯ ಸರ್ಕಾರ ಹೆಚ್ಚಿಸಿದೆ ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ಥಿಕ ಸ್ಥಿತಿಗತಿಯ ಅರಿವಿಲ್ಲದೆ ‘ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದ್ದಾರೆ. ಒಂದೆಡೆ ಲಾಭ ತೋರಿಸಿದಂತೆ ಮಾಡಿ, ಇನ್ನೊಂದೆಡೆ ಬೆಲೆ ಹೆಚ್ಚಿಸಿ, ಜನರಿಂದ ದುಡ್ಡು ಕಸಿದುಕೊಳ್ಳುವ ಪ್ರಯತ್ನ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಅವರ ಪಕ್ಷದ ಶಾಸಕರುಗಳೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಸರ್ಕಾರವನ್ನು ಆಯ್ಕೆ ಮಾಡಿರುವ ಜನ ಕೂಡ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ. ‘ಗ್ಯಾರಂಟಿ’ ಯೋಜನೆಗಳ ನೆಪದಲ್ಲಿ ಭ್ರಷ್ಟಾಚಾರ, ಒಂದು ವರ್ಗಕ್ಕೆ ಅನ್ಯಾಯ ಮಾಡಿದರೆ ಅದರ ವಿರುದ್ಧ ಹೋರಾಟ ನಡೆಸಲಾಗುವುದು. ಕೊಟ್ಟ ಮಾತಿನಂತೆ ಯಾವುದೇ ಷರತ್ತುಗಳಿಲ್ಲದೆ ಎಲ್ಲಾ ‘ಗ್ಯಾರಂಟಿ’ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.