ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ಹೈಕೋರ್ಟ್ ತೆರವು

ಬೆಂಗಳೂರು, ನ.8-ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಆದೇಶ ಹೊರಡಿಸಿದೆ.
ಕೆಜಿಎಫ್-2 ಹಾಡು ತೆಗೆಯುತ್ತೇವೆಂದು ಕಾಂಗ್ರೆಸ್ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರಿಂದ ಕೋರ್ಟ್ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿ ಆದೇಶಿಸಿದೆ.
ಕೆಜಿಎಫ್ 2 ಹಾಡಿನ ದುರ್ಬಳಕೆ ಆರೋಪ ಮೇಲೆ ಕಾಂಗ್ರೆಸ್ ನ ಭಾರತ್ ಜೋಡೋ ಟ್ವಿಟ್ಟರ್ ಖಾತೆಗೆ ನಿರ್ಬಂಧಿಸಿ ನಗರದ ವಾಣಿಜ್ಯ ನ್ಯಾಯಾಲಯ ನಿನ್ನೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿದೆ.
ಇನ್ನು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾಳೆ ಮಧ್ಯಾಹ್ನದೊಳಗೆ ಕೆಜಿಎಫ್-2 ಹಾಡು ತೆಗೆಯುತ್ತೇವೆ. ಕಾಂಗ್ರೆಸ್​ನ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಾಡು ತೆಗೆಯುತ್ತೇವೆ. ಸಾಮಾಜಿಕ ಜಾಲತಾಣದ ಸ್ಕ್ರೀನ್ ಶಾಟ್ ನೀಡುತ್ತೇವೆ. ಅರ್ಜಿದಾರ ಎಂಆರ್​​ಟಿ ಮ್ಯೂಸಿಕ್ ಸಂಸ್ಥೆಗೆ ದಾಖಲೆ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪ್ರಕರಣ ಹಿನ್ನೆಲೆ
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಕಾಲ್ನಡಿಗೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ವಿಡಿಯೋಗೆ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್​..ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್​​ಟಿ ಮ್ಯೂಸಿಕ್​ನವರು ಫೋರ್ಜರಿ ಪ್ರಕರಣ ದಾಖಲು ಮಾಡಿದ್ದರು. ಯಶವಂತಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಮಾತ್ರವಲ್ಲದೆ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.