ಕಾಂಗ್ರೆಸ್ ಟಿಕೆಟ್ ವಿಳಂಬ ಮಾಜಿ ಮೇಯರ್, ಸದಸ್ಯರು ಕೆ.ಆರ್.ಪಿ.ಪಿ.ಗೆ ಸೇರ್ಪಡೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.09: ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಳಂಬ ಒಂದು ಕಡೆಯಾದರೆ ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದಿಂದ ಪಾಲಿಕೆಯಲ್ಲಿ ಕಳೆದ ಬಾರಿ ಮೇಯರ್, ಸದಸ್ಯರಾಗಿದ್ದ ಹಲವರು ಇಂದು ಕಲ್ಯಾಣ ರಾಜ್ಯ ಪ್ರಗತಿ (ಕೆ.ಆರ್.ಪಿ.ಪಿ.) ಪಕ್ಷಕ್ಕೆ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಬಲ ಕುಸಿಯಲು ಆರಂಭವಾಯ್ತೆ ಎಂಬ ಪ್ರಶ್ನೆ ಉದ್ಭವಿಸತೊಡಗಿದೆ.
ಜನಾರ್ಧನರೆಡ್ಡಿಯವರ ನೂತನ ಪಕ್ಷ ಕೆ.ಆರ್.ಪಿ.ಪಿ.ಗೆ ಆರಂಭದಲ್ಲಿ ಅಂತಹ ಬೆಂಬಲ ಕಾಣಿಸಲಿಲ್ಲ. ಬಿಜೆಪಿಯಿಂದ ಹೆಚ್ಚಿನ ಮುಖಂಡರು, ಕಾರ್ಯಕರ್ತರು ಕೆ.ಆರ್.ಪಿ.ಪಿ ಕಡೆ ವಾಲದಿದ್ದರೂ ದಿನೇ ದಿನೇ ಕಾಂಗ್ರೆಸ್ ನ ಒಂದೊಂದು ದಳಗಳು ಉದರತೊಡಗಿ ಕೆ.ಆರ್.ಪಿ.ಪಿ.ಯತ್ತ ಮುಖಮಾಡ ತೊಡಗಿವೆ.
ಕಮ್ಮ ಸಮುದಾಯದ ಮುಖಂಡ ಮಾಜಿ ಮೇಯರ್ ಗುಱ್ರಂ ವೆಂಕಟರಮಣ, ಪಾಲಿಕೆಯ ಮಾಜಿ ಸದಸ್ಯರುಗಳಾದ ಲಿಂಗಾಯತ ಸಮುದಾಯದ ವಿ.ಎಸ್.ಮರಿದೇವಯ್ಯ, ಪಿಂಜಾರ್ ಸಮುದಾಯದ ಶಸಾಬ್, ಮುಸ್ಲಿಂ ಸಮುದಾಯದ ಪರ್ವಿನ್ ಬಾನು, ಕಾಂಗ್ರೆಸ್ ಮುಖಂಡ ಭೋವಿ ಸಮಾಜದ ರಾಮುಡು ಇಂದು ಕೆ.ಆರ್.ಪಿ.ಪಿ ಸೇರಿದ್ದಾರೆ.
ಸೇರಿದ ನಂತರ ಮಾತನಾಡಿದ ಇವರು ಬಳ್ಳಾರಿ ನಗರಕ್ಕೆ ಮಹಿಳೆ ಈ ಬಾರಿ ಶಾಸಕರಾಗಬೇಕೆಂದು ಬಯಸಿ ಈ ಪಕ್ಷ ಸೇರಿದ್ದೇವೆಂದರು.
 ತಡೆಯತ್ನ ವಿಫಲ
ವೆಂಕಟರಮಣ ಅವರು ಕೆ.ಆರ್.ಪಿ.ಪಿ ಸೇರುತ್ತಾರೆಂದು ನಿನ್ನೆ ಸಂಜೆವಾಣಿ ಪ್ರಕಟಿಸಿದ ಮೇಲೆ, ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ಅವರ ಮನೆಗೆ ತೆರಳಿ ಪಕ್ಷದ ಮುಖಂಡರಿಂದಲೂ ಹೇಳಿದರೂ ಕಾಂಗ್ರೆಸ್ ತೊರೆಯುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.
 ಇಷ್ಟೇ ಅಲ್ಲ
ಅಲ್ಪಸಂಖ್ಯಾತರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬದಿಂದ ಬೇಸತ್ತು ಕೆ.ಆರ್.ಪಿ.ಪಿ ಕಡೆ ಒಲವು ತೋರ ತೊಡಗಿದ್ದಾರೆಂದು ಇನ್ನು ಅನೇಕ ಮುಸ್ಲಿಂ ಮತ್ತು ಕಮ್ಮ ಪಾಲಿಕೆ ಸದಸ್ಯರು ಆಂತರಿಕವಾಗಿ ಕೆ.ಆರ್.ಪಿ.ಪಿ ಬೆಂಬಲಿಸುವ ಬಗ್ಗೆ ಗುಪ್ತ ಸಭೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಒಟ್ಟಾರೆ ಕೆ.ಆರ್.ಪಿ.ಪಿಯ ಮರದ ಕೊಂಬೆಗಳು ಒಂದೊಂದಾಗಿ ಟಿಸಿಲೊಡೆಯ ತೊಡಗಿವೆ ಎನ್ನಬಹುದು.