ಕಾಂಗ್ರೆಸ್ ಟಿಕೆಟ್ ಅರ್ಜಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಬಳ್ಳಾರಿ, ಏ.02: ಈ ತಿಂಗಳು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ವಾರ್ಡುಗಳಲ್ಲಿ ಸ್ಪರ್ಧೆ ಮಾಡಲು ಬಯಸಿರುವ ಅಭ್ಯರ್ಥಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲು ತಾಮುಂದು ನಾಮುಂದು ಎಂದು ಮುಗಿ ಬಿದ್ದಿದ್ದು ಇಂದು ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕಂಡುಬಂತು.
ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರು ಅರ್ಜಿಗಳನ್ನು ವಿತರಿಸಿದರು. ನೂರಕ್ಕೂ ಹೆಚ್ಚು ಜನ ಅರ್ಜಿಗಳನ್ನು ಪಡೆದಿದ್ದಾರಂತೆ. ಇದರಿಂದಾಗಿ ಕಾಂಗ್ರೆಸ್ ಟಿಕೆಟ್ ಗೆ ಬಹುಬೇಡಿಕೆ ಇರುವುದು ಕಂಡು ಬರುತ್ತಿದೆ.
ಈ ಮಧ್ಯೆ ಟಿಕೆಟ್ ನೀಡುವ ಸಂಬಂಧ ಜಿಲ್ಲೆಯ ನಾಯಕರನ್ನೊಳಗೊಂಡ ಸಮಿತಿಯನ್ನು ಮಾಜಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಅವರು ಈ ತಿಂಗಳ 5 ಅಥವಾ 6ರಂದು ನಗರಕ್ಕೆ ಬಂದ ನಂತರ ಸ್ಪರ್ಧೆ ಬಯಸಿದವರ ಅರ್ಜಿಗಳ ಪರಿಶೀಲನೆ ಮಾಡಿ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.
ಇಂದು ಜಿಲ್ಲಾ ಅಧ್ಯಕ್ಷ ರಫೀಕ್ ಅವರು ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರ ಸಭೆ ನಡೆಸಿ ಪಾಲಿಕೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು.